ಲಕ್ಷ್ಮೇಶ್ವರದಲ್ಲಿ ಅಸ್ತಮಾ ಯಜ್ಞ

ಲಕ್ಷ್ಮೇಶ್ವರ,ಜೂ10 : ಪ್ರತಿವರ್ಷ ಮೃಗಶಿರಾ ಮಳೆ ಪ್ರವೇಶ ಕಾಲಕ್ಕೆ ಪಟ್ಟಣದಲ್ಲಿ ಅಸ್ತಮಾ ಪೀಡಿತರಿಗೆ ಉಚಿತ ಮಂತ್ರೌಷಧ ನೀಡಲಾಗುತ್ತದೆ. 57ನೇ ವರ್ಷದ ಅಸ್ತಮಾ ಯಜ್ಞ ಗುರುವಾರ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಸ್ತಮಾ ಪೀಡಿತರು ಗುರುವಾರ ಮಧ್ಯ ರಾತ್ರಿ ಮೃಗಶಿರ ಮಳೆ ಪ್ರವೇಶ ಕಾಲಕ್ಕೆ ಮಂತ್ರೌಷಧ ಸೇವಿಸಿದರು. ಅಂದಾಜು 5-6 ಸಾವಿರ ಜನರು ಔಷಧಿಗಾಗಿ ಆಗಮಿಸಿದ್ದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ನಡೆದ ಕಾರ್ಯಕ್ರಮವನ್ನು ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಂತ್ರೌಷಧ ವಿತರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮೃಗಶಿರಾ ಮಳೆಯ ನಕ್ಷತ್ರದ ವೇಳೆಗೆ ಅಸ್ತಮಾ ಪೀಡಿತರಿಗೆ ಉಚಿತ ಔಷದಿ ನೀಡುವ ಮೂಲಕ ಲಕ್ಷಾಂತರ ಜನರು ಈ ರೋಗದಿಂದ ವಾಸಿ ಮಾಡಿದ ಕೀರ್ತಿ ದಿ.ಬಾಬುರಾವ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಅಸ್ತಮಾ ಕಾಯಿಲೆಯನ್ನು ವಾಸಿ ಮಾಡಬಹುದು ಎನ್ನುವುದನ್ನು ಇವರು ತಮ್ಮ ಆಯುರ್ವೇದದ ಔಷಧಿ ಮೂಲಕ ಋಜುವಾತು ಮಾಡಿದ್ದಾರೆ' ಎಂದರು. ಹುಬ್ಬಳ್ಳಿ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಬಿ. ಜೋಶಿ ಮಾತನಾಡಿಆಯುರ್ವೇದ ಔಷಧ ಪದ್ಧತಿ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ. ಗಿಡಮೂಲಿಕೆಗಳನ್ನು ಬಳಸಿ ಔಷದಿ ನೀಡುವುದರಿಂದ ಕಠಿಣ ರೋಗಗಳೂ ಕೂಡ ವಾಸಿ ಆಗುತ್ತವೆ.
ಸಮಾಜ ಸೇವೆ ಮಾಡುವ ಮನೋಭಾವ ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಈ ಭಾಗದಲ್ಲಿ ದಿ.ವೈದ್ಯಬಾಬುರಾವ್ ಕುಲಕರ್ಣಿಯವರ ಸೇವಾ ಮನೋಭಾವನೆಯಿಂದ ಅಸ್ತಮಾ ರೋಗಕ್ಕೆ ಔಷಧಿಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ 57 ವರ್ಷಗಳಿಂದ ನೀಡುತ್ತಾ ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಆಗಿದೆ. ಇಲ್ಲಿ ಸೇರಿರುವ ಜನಸಂದಣಿಯನ್ನು ನೋಡಿದಾಗ ಆ ಔಷಧಿಯ ಮಹತ್ವದ ಅರಿವಾಗುತ್ತದೆ. ದಿ.ವೈದ್ಯ ಬಾಬುರಾವ್ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ ಎಂದರೂ ಸಹ ಅವರ ಆತ್ಮ ಸದಾ ಇಲ್ಲಿಯೇ ಇದ್ದು ಎಲ್ಲರನ್ನು ರಕ್ಷಿಸುತ್ತಿದೆ’ ಎಂದು ಹೇಳಿದರು.
ಡಾ.ಮಹೇಶ ದೇಸಾಯಿ ಔಷಧಿ ಮಹತ್ವ, ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿದರು. ಎಂ.ಕೆ. ಪಡಸಲಗಿ ಅಧ್ಯಕ್ಷತೆ ವಹಿಸಿದ್ದರು. ಪಲ್ಲಣ್ಣ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ವಿ.ಜಿ. ಪಡಗೇರಿ, ನಿಂಗಪ್ಪ ತಹಶೀಲ್ದಾರ, ನಗರಾಜ ಹಣಗಿ, ಅಲ್ತಾಫ್ ಹವಾಲ್ದಾರ, ಗುರುರಾಜ ಕುಲಕರ್ಣಿ, ಆರ್.ಎ. ಕುಲಕರ್ಣಿ, ಮ್ಯಾಗೇರಿ ಓಣಿಯ ಹಿರಿಯರು, ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಇದ್ದರು. ಕೃಷ್ಣ ಕುಲಕರ್ಣಿ ನಿರೂಪಿಸಿದರು. ಡಿ.ಎಂ. ಪೂಜಾರ ವಂದಿಸಿದರು.
**