ಲಕ್ಷ್ಮೀದೇವಿ ದೇವಾಲಯ ಲೋಕಾರ್ಪಣೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.02: ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧುಘಟ್ಟ ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯ ಜೀರ್ಣೋದ್ದಾರ ಹಾಗೂ ನೂತನ ಕಳಸ ಪ್ರತಿಷ್ಟಾಪನಾ ಕಾರ್ಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಶನಿವಾರದಿಂದ ಆರಂಭವಾದ ದೇವಾಲಯ ಜೀರ್ಣೋದ್ದಾರ ಪೂಜಾ ಕಾರ್ಯಕ್ರಮಗಳಾದ ತೀರ್ಥಾನಯನ, ಗಣಪತಿಹೋಮ, ಪೂಜೆ, ಪುಣ್ಯಹ, ನಾಂದಿ,ಆಚಾರ್ಯಾದಿ ಋತ್ವಿಕ್ ವರ್ಣ, ಮಂಟಪಪ್ರತಿಷ್ಟೆ, ಜಲಾಧಿವಾಸ, ರಕ್ಷಾಬಂಧನ, ಕಲಶ ಪ್ರತಿಷ್ಟಾಪನೆ, ನವಗ್ರಹ ಹೋಮ, ವಾಸ್ತುಹೋಮ, ಪ್ರಥಮ ಪರ್ಯಾಯ ಹೋಮ, ತೈಲಮಾರ್ಜನೆ, ದಿವ್ಯಾಧಿವಾಸ ಮಹಾಮಂಗಳಾರತಿ, ಹೋಮ ಮಂತ್ರಪಾರಾಯಣ, ಲಲಿತಾಸಹಸ್ರನಾಮ ಪೂಜೆ, ಚಂಡಿಕಾಹೋಮ, ಸುವಾಸಿನೀ ಪೂಜೆ, ಕುಮಾರಿಪೂಜೆ,ರುದ್ರಮಂಡಲ ರಚನೆ, ನೇತ್ರೋನ್ಕಿಲನ, ಶಯ್ಯಾಧಿವಾಸ, ಗರ್ಭಾಗಾರ ಪ್ರವೇಶ, ಅಷ್ಟಬಂಧನ, ಕಾರ್ಯಕ್ರಮಗಳು ನಡೆದವು.
ಸೋಮವಾರ ಆದಿಚುಂಚನಗಿರಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬೇಬಿಮಠದ ಶ್ರೀಶ್ರೀಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಉತ್ತರಾಂಗ ಹೋಮ, ಪ್ರಾಣಪ್ರತಿಷ್ಟೆ, ಮಹಾಭಿಷೇಕ, ರಂಭಾಸ್ಥಂಭ, ಛೇದನ, ಕೂಷ್ಮಾಂಡಬಲಿ, ಪೂರ್ಣಾಹುತಿ, ಪ್ರಸಾರ ಕಲಸ ಪ್ರತಿಷ್ಟಾಫನೆ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರಿದವು.
ಶಾಸಕ ಹೆಚ್.ಟಿ.ಮಂಜು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಲವಾರು ವರ್ಷಗಳಿಂದ ದೇವಾಲಯ ಜೀರ್ಣೋದ್ದಾರ ಕೆಲಸಕ್ಕೆ ಸಿಂಧಘಟ್ಟ ಗ್ರಾಮಸ್ಥರು ಹಾಗೂ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವರ ಒಕ್ಕಲಿನವರ ಮತ್ತು ಸರ್ಕಾರ ಹಾಗೂ ದಾನಿಗಳ ಶ್ರಮದಿಂದ ಇಂದು ತಾಯಿ ಲಕ್ಷ್ಮೀದೇವಿ ಇಲ್ಲಿ ನೆಲೆಸಿದ್ದಾಳೆ. ಈ ದಿನಕ್ಕಾಗಿ ಹಗಲಿರುಳು ಶ್ರಮಿಸಿದ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು. ತಾಯಿ ಲಕ್ಷ್ಮೀದೇವಿ ಕಾಲಕಾಲಕ್ಕೆ ಮಳೆ, ಬೆಳೆ ಕರುಣಿಸಿ ತನ್ನ ಭಕ್ತರನ್ನು ಸಂಕಷ್ಟದಿಂದ ದೂರಮಾಡಿ ಸುಖಶಾಂತಿ, ನೆಮ್ಮದಿಯಿಂದ ಸಾಮರಸ್ಯದ ಜೀವನ ನಡೆಸಲು ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಶುಭಕೋರಿದರು.
ಪೂಜಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಎಸ್.ಸಿ.ಅರವಿಂದ್, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಅಂಬರೀಶ್, ಸಿಂಧಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಗಿರೀಶ್, ಪ್ರಥಮ ದರ್ಜೆ ಗುತ್ತಿಗೆದಾರ ಎ.ಆರ್.ರಘು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ದೇವಾಲಯ ಜೀರ್ಣೋದ್ದಾರ ಸಮಿತಿ ಸದಸ್ಯಾರದ ಎಸ್.ಎನ್.ರವಿ, ಕುಮಾರಸ್ವಾಮಿ, ಎಸ್.ಸಿ.ಅಶೋಕ್, ಆನಂದ್ ಕುಮಾರ್, ಗ್ರಾಪಂ ಸದಸ್ಯರಾದ ನವೀನ್, ಕೃಷ್ಣೇಗೌಡ, ಪ್ರಸಾದ್, ದಾಸರವಿ, ನಾಗೇಶ್ ಸೇರಿದಂತೆ ಗ್ರಾಮದ ಮುಖಂಡರುಗಳು ಮತ್ತು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿದ್ದ ದೇವರ ಒಕ್ಕಲಿನ ಸಾವಿರಾರು ಭಕ್ತರು ಹಾಜರಿದ್ದರು.