ಲಕ್ಷ್ಮಣ್ ಹೇಳಿಕೆಗೆ ಎಂ.ಎ.ಮೋಹನ್ ತೀವ್ರ ಖಂಡನೆ

ಸಂಜೆವಾಣಿ ನ್ಯೂಸ್
ಮೈಸೂರು:ಮಾ.24:- ಮೈಸೂರು ರಾಜವಂಶಸ್ಥರಾಗಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ವಿರುದ್ಧವಾಗಿ ಮಾತನಾಡಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಹೇಳಿಕೆಯನ್ನು ಬಿಜೆಪಿ ವಕ್ತಾರ ಎಂ.ಎ. ಮೋಹನ್ ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ. ಲಕ್ಷ್ಮಣ್ ಅವರು ಲೋಕಸಭಾ ಅಭ್ಯರ್ಥಿಯಾದ ಬಳಿಕ ಘನತೆಯಿಂದ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಪಕ್ಷದ ವಕ್ತಾರನಾಗಿ, ಸಾಮಾನ್ಯ ವ್ಯಕ್ತಿಯಾಗಿ ಮಾತನಾಡವುದಕ್ಕೂ ಚುನಾವಣಾ ಅಭ್ಯರ್ಥಿಯಾಗಿ ಮಾತನಾಡುವುದಕ್ಕೂ ವ್ಯತ್ಯಾಸವಿದೆ. ಅಲ್ಲದೇ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಮಾತನಾಡುವಾಗ ಅದಕ್ಕೆ ಗೌರವವಿದ್ದು, 20 ಲಕ್ಷಕ್ಕೂ ಹೆಚ್ಚು ಜನರ ಘನತೆಯನ್ನು ಒಬ್ಬ ಅಭ್ಯರ್ಥಿ ಎತ್ತಿಹಿಡಿಯಬೇಕು. ಮೈಸೂರು ರಾಜಮನೆತನದ ಘನತೆ, ಗೌರವ ಏನೆಂಬುದು ಇಡೀ ದೇಶಕ್ಕೆ ಗೊತ್ತಿದೆ. ಮೈಸೂರು ಅರಸರು ದೇಶ ವಿದೇಶದಲ್ಲಿದ್ದ ಸವಲತ್ತುಗಳನ್ನು ತಂದು ಮೈಸೂರು ಅಭಿವೃದ್ಧಿ ಮಾಡಿದ್ದಾರೆ. ಹೀಗಿದ್ದರೂ ಲಕ್ಷ್ಮಣ್ ಅವರು ರಾಜಮನೆತನದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಅಲ್ಲದೇ ಮತದಾರರಿಗೆ ಅರಮನೆ ಕಾಯುವವರು ಬೇಕಾ? ಜನರ ಮನೆ ಕಾಯುವವನು ಬೇಕಾ? ಎಂದು ಲಕ್ಷ್ಮಣ್ ಪ್ರಶ್ನಿಸಿದ್ದಾರೆ. ಆದರೆ ಮೈಸೂರು ಅರಸರು ನೂರು ವರ್ಷಗಳ ಹಿಂದೆಯೇ ಜನರ ಕಷ್ಟಗಳಿಗೆ ಸ್ಪಂದಿಗೆ ಅವರುಗಳಿಗೆ ಸ್ವಂತ ಮನೆಗಳನ್ನು ನೀಡುವ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಜನಸಾಮಾನ್ಯರಿಗೆ ಮನೆಗಳನ್ನು ನೀಡಿದ ರಾಜಮನೆತನದವರ ವಿಚಾರದಲ್ಲಿ ಮನೆ ಕಾಯುವವನು ಬೇಕಾ? ಎಂದಿರುವ ಲಕ್ಷ್ಮಣ್ ಅವರು, ಸಿದ್ದರಾಮಯ್ಯ ಅವರ ಮನೆ ಕಾದಿದ್ದಕ್ಕಾಗಿ ಹಾಗೂ ಸೇವೆ ಮಾಡಿ, ಹೊಗಳುಭಟ್ಟನಂತೆ ಕೆಲಸ ಮಾಡಿದ್ದಕ್ಕಾಗಿ ಲಕ್ಷ್ಮಣ್‍ಗೆ ಟಿಕೆಟ್ ನೀಡಲಾಗಿದೆ ಎಂದು ಟೀಕಿಸಿದರು.
ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದೆ ಎಂದಿದ್ದಾರೆ. ಆದರೆ ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಹತ್ತು ವರ್ಷಗಳ ಕಾಲ ಅವಕಾಶ ನೀಡಿತ್ತು.
ಇದೀಗ ಬೇರೆ ಸಮುದಾಯದವರಿಗೂ ಅವಕಾಶ ಮಾಡಿಕೊಡುವ ಸಲುವಾಗಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್, ನಗರ ಬಿಜೆಪಿ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇತರರಿದ್ದರು.
ಬಿಜೆಪಿ ಗೆಲ್ಲಿಸುವುದೇ ನಮ್ಮ ಹೋರಾಟ
ಮೈಸೂರು: ಭಾರತವನ್ನು ಗೆಲ್ಲಿಸಿ ಎಂಬುದೇ ನಮ್ಮ ಹೋರಾಟ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರತವನ್ನು ಗೆಲ್ಲಿಸಿ ಎಂಬುವುದೇ ನಮ್ಮ ಹೋರಾಟವಾಗಿದೆ ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 140 ಕೋಟಿ ಜನರು ಮೋದಿ ಪರವಾಗಿದ್ದು, ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡಲು ಪಣ ತೊಟ್ಟಿದ್ದಾರೆ. ಈ ಹೋರಾಟದಲ್ಲಿ ನಾರಿಯರನ್ನ ಒಗ್ಗೂಡಿಸುವ ಪ್ರಯತ್ನ ಮಾಡಲಾಗಿತ್ತಿದೆ. ಮೋದಿ ಅವರ ಆಡಳಿತಾವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಬದುಕು ಸುಧಾರಣೆಯಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಯೋಜನೆಗಳೇ ಪ್ರಮುಖವಾದ ಕಾರಣವಾಗಿದೆ. ಹೀಗಾಗಿ ಮಹಿಳೆಯರು ಈ ಬಾರಿ ಮೋದಿಯವರಿಗೆ ಬಹೃತ್ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕ ರಾಜ್ ಮತ್ತಿತರರು ಇದ್ದರು.