ಲಕ್ಷಾಂತರ ಮೌಲ್ಯದ ಪ್ಯಾಂಗೋಲಿನ್ ಚಿಪ್ಪು ವಶ


ದಾವಣಗೆರೆ.ನ.೬;  ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿ ವನ್ಯಜೀವಿಯ ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದ ಜಾಲದ 18 ಮಂದಿ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ 67 ಕೆಜಿ 700 ಗ್ರಾಂನಷ್ಟು ಪ್ಯಾಂಗೋಲಿನ್ ಚಿಪ್ಪು, ಕೃತ್ಯಕ್ಕೆ ಬಳಸಿದ 2 ಓಮಿನಿ ಹಾಗೂ 1 ಕಾರನ್ನು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಜಪ್ತು ಮಾಡಿದ ಘಟನೆ ಜಿಲ್ಲೆಯ ಹರಿಹರ ಹೊರ ವಲಯದ ಶಿವಮೊಗ್ಗ ರಸ್ತೆಯಲ್ಲಿ ಬುಧವಾರ ನಡೆದಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂಲದ 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮೂರು ವಾಹನಗಳಲ್ಲಿ ಪ್ಯಾಂಗೋಲಿನ್ ವನ್ಯಜೀವಿಯ ಚಿಪ್ಪುಗಳನ್ನು ತುಂಬಿಕೊಂಡು ಬೇರೆಡೆ ಮಾರಾಟಕ್ಕೆ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಡಿಸಿಆರ್‌ಬಿ ಡಿವೈಎಸ್ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಬಿ.ವಿ.ಗಿರೀಶ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.