ಲಕ್ಷಾಂತರ ಮಕ್ಕಳಿಗೆ ಬೆಳಕು ತೋರಿದ ಸ್ವಾಮೀಜಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ಬಡವರಿಗೆ, ನಿರ್ಗತಿಕರಿಗೆ,ತಂದೆ,ತಾಯಿ ಇಲ್ಲದ ಅನಾಥರಾಗಿದ್ದ ಲಕ್ಷಾಂತರ ಮಕ್ಕಳಿಗೆ ಪ್ರೀತಿಯಿಂದ, ಅಕ್ಕರೆಯಿಂದ  ಹಾಗೂ ಕರುಣೆಯಿಂದ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿದವರು ಪದ್ಮಭೂಷಣ, ಕರ್ನಾಟಕ ರತ್ನ,ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿಗಳು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪವಿತ್ರ ದಿನ ಹಾಗೂ ಭಾರತೀಯ ರಿಜರ್ವ್ ಬ್ಯಾಂಕ್ -1935 ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರು 1926ರಲ್ಲಿ ಮಂಡಿಸಿದ ರೂಪಾಯಿ ಮೌಲ್ಯದ ಮೂಲ ಹಾಗೂ ಪರಿಹಾರ ಕ್ರಮಗಳನ್ನು ಆಧರಿಸಿ 1ನೇ ಏಫ್ರಿಲ್ 1935ರಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಸ್ಥಾಪನೆ ಆಯಿತೆಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಪವಿತ್ರ, ಪ್ರಿಯಾಂಕಾ, ವನಜಾಕ್ಷಿ,ಹೊನ್ನೂರಸ್ವಾಮಿ,ನಿಖಿಲ್, ನಿವೇದಿತಾ ಅವರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಮುನಾವರ ಸುಲ್ತಾನ,ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಚನ್ನಮ್ಮ, ಸುಮತಿ, ಸುಧಾ, ವೈಶಾಲಿ, ಶ್ವೇತಾ, ಶಶಮ್ಮ,ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.