ಲಕ್ಷಾಂತರ ಭಕ್ತರ ಸಂಗಮ ಅಂಬಾದೇವಿ ರಥೋತ್ಸವ

ಸಿಂಧನೂರು.ಜ.೮- ಭಕ್ತರ ಆರಾಧ್ಯ ದೈವ ಭಗಳಾಂಭಿಕಾ ಸಿದ್ಧ ಪರ್ವತ ಅಂಬಾಮಠದ ಅಂಬಾ ದೇವಿ ರಥೋತ್ಸವ ಲಕ್ಷಾಂತರ ಭಕ್ತರ ಮಂತ್ರ ಜಯ ಘೋಷಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ತಾಲ್ಲೂಕಿನ ಸೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಬಾಮಠದ ಅಂಬಾದೇವಿ ದೇಶದ ಎರಡನೇ ಶಕ್ತಿ ಪೀಠವಾದ ಸುಕ್ಷೇತ್ರ ಅಂಬಾಮಠ ಸಿದ್ಧ ಪರ್ವತ ಅಂಬಾದೇವಿಗೆ ಬನದ ಹುಣ್ಣಿಮೆಯ ದಿನ ಬೆಳಗಿನ ಜಾವ ಕಂಕುಮಾರ್ಚನೆ, ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ,ಸೇರಿದಂತೆ ವಿವಿಧ ಪೂಜಾ ಕಂಕಣರ್ಯಗಳು ಜರುಗಿದವು.
ಸಂಜೆ ೫ ಗಂಟೆಗೆ ದೇವಸ್ಥಾನದ ಅರ್ಚಕರು ಅಂಬಾದೇವಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂಡಿಸಿ ಪೂಜೆ ನೆರವೇರಿಸಿದ ನಂತರ ಶಾಸಕ ವೆಂಕಟರಾವ್ ನಾಡಗೌಡ ತಹಸೀಲ್ದಾರ ಅರುಣ ಕುಮಾರ ದೇಸಾಯಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಭಕ್ತ ಸಾಗರ ಮಧ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಉತ್ತತ್ತಿ, ಹೂ, ಬಾಳೆ ಹಣ್ಣುಗಳನ್ನು ರಥೋತ್ಸವಕ್ಕೆ ಎಸೆದು ಜಯ ಘೋಷೆಗಳನ್ನು ಕೂಗಿ ಭಕ್ತರು ತಮ್ಮ ಭಕ್ತಿಯನ್ನು ದೇವಿಗೆ ಅರ್ಪಿಸಿದರು. ದೇಶದ ವಿವಿಧ ಭಾಗಗಳಿಂದ ಸಾಧು ಸಂತರು ಶರಣರು ಸ್ವಾಮಿಗಳು ಆಗಮಿಸಿದ್ದು ಸಾಧುಗಳು ಭಗಳಾಂಬಿಕೆ ನಿನಗೆ ಉದೊ,ಉದೊ ಎಂದರು.
ಶಾಸಕ ವೆಂಕಟರಾವ್ ನಾಡಗೌಡ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಕೆಪಿಸಿಸಿ ರಾಜ್ಯ ಮಾಜಿ ಕಾರ್ಯದರ್ಶಿಯಾದ ಕೆ.ಕರಿಯಪ್ಪ, ಕಾಂಗ್ರೆಸ್ ಮುಖಂಡರಾದ ಪಂಪನಗೌಡ ಬಾದರ್ಲಿ, ನಗರಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ, ಅಂಬಾಮಠ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಹಿರೇಮಠ ಕಾರ್ಯದರ್ಶಿ ಹನುಮೇಶ ಸಮಿತಿಯ ಸದಸ್ಯರು, ಸೇರಿದಂತೆ ವಿವಿಧ ಮಠಗಳ ಸ್ವಾಮಿಗಳು ಅಧಿಕಾರಿಗಳು ಭಾಗವಸಿದ್ದರು.
ಕರ್ನಾಟಕ ,ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಜಾತ್ರೆಗೆ ಆಗಮಿಸಿದ್ದರು ಯಾವುದೇ ಅಹಿತಕರ ಘಟನೆಯ ನಡೆಯದಂತೆ ಪೋಲಿಸರು ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ಬಸ್ ವ್ಯವಸ್ತೆಯನ್ನ ಸಾರಿಗೆ ಇಲಾಖೆಯು ಮಾಡಲಾಗಿತ್ತು.