ಲಕ್ನೊ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ

ಲಕ್ನೊ: ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಸ್ಪಿನ್ ಜಾದೂ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೊ ವಿರುದ್ಧ 6 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ರಿಷಬ್ ಪಂತ್ ಪಡೆ ಎರಡನೆ ಗೆಲುವು ದಾಖಲಿಸಿದೆ.
ಇಲ್ಲಿನ ಏಕನಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೊ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು. ಡೆಲ್ಲಿ ಕ್ಯಾಪಿಟಲ್ಸ್ 18.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.
168 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸೆಗೆ ಆರಂಭಿಕರಾದ ಪೃಥ್ವಿ ಶಾ(32 ರನ್) ಮತ್ತು ಡೇವಿಡ್ ವಾರ್ನರ್ (8ರನ್) ಮೊದಲ ವಿಕೆಟ್ಗೆ 24 ರನ್ ಸೇರಿಸಿದರು. ಮೂರನೆ ಕ್ರಮಾಂಕದಲ್ಲಿ ಬಂದ ಜಾಕ್ ಫ್ರಾಸರ್ (55ರನ್), ನಾಯಕ ರಿಷಭ್ ಪಂತ್ (41ರನ್), ಟ್ರಿಸ್ಟನ್ ಸ್ಟಬ್ಸ್ ಅಜೇಯ 15 ರನ್, ಶಾಯ್ ಹೋಪ್ ಅಜೇಯ 11 ರನ್ ಗಳಿಸಿದರು. ಲಕ್ನೊ ಪರ ರವಿ ಬಿಷ್ಣೋಯಿ 25ಕ್ಕೆ 2, ನವೀನ್ ಉಲ್ ಹಕ್ 24ಕ್ಕೆ 1, ಯಶ್ ಠಾಕೂರ್ 31ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಆಯೂಷ್ ಬದೋನಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ಗೆ 168 ರನ್ಗಳ ಗುರಿ ನೀಡಿತು. ಲಕ್ನೊ ಸ್ಪಿನ್ನರ್ ಕುಲ್ದೀಪ್ ದಾಳಿಗೆ ತತ್ತರಿಸಿತು. ಪವರ್ ಪ್ಲೆ ಅಂತ್ಯಕ್ಕೆ ಲಕ್ನೋ ತಂಡ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು.
ಲಕ್ನೊ ಪರ ಕ್ವಿಂಟಾನ್ ಡಿಕಾಕ್ 19, ಕೆ.ಎಲ್.ರಾಹುಲ್ 39, ದೇವದತ್ ಪಡಿಕ್ಕಲ್ 3, ಸ್ಟೊಯ್ನಿಸ್ 8, ದೀಪಕ್ ಹೂಡಾ 10 ರನ್ ಗಳಿಸಿದರು. 94ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಯೂಷ್ ಬದೋನಿ ಅಜೇಯ 55 ರನ್ ಹೊಡೆದು ತಂಡಕ್ಕೆ ನೆರವಾದರು. ಡೆಲ್ಲಿ ಪರ ಕುಲ್ದೀಪ್ 20ಕ್ಕೆ 3, ಖಲೀಲ್ 41ಕ್ಕೆ 2, ಇಶಾಂತ್ 36ಕ್ಕೆ1, ಮುಕೇಶ್ 41ಕ್ಕೆ 1 ವಿಕೆಟ್ ಪಡೆದರು.