ಲಂಬಾಣಿ ಸಮುದಾಯದವರು ಅಡವಿಯ ಹುಲಿಗಳು ಒಳ ಮೀಸಲಾತಿಯ ನೆಪಮಾಡಿಕೊಂಡು ಅವರನ್ನು ಕೆಣಕಬೇಡಿ

ವಿಜಯಪುರ, ನ.3-ಲಂಬಾಣಿ ಸಮುದಾಯದವರು ಅಡವಿಯ ಹುಲಿಗಳು. ಒಳ ಮೀಸಲಾತಿಯ ನೆಪಮಾಡಿಕೊಂಡು ಅವರನ್ನು ಕೆಣಕಬೇಡಿ. ಪರಿಣಾಮ ಬೇರೆ ಆಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ವಿಜಯಪುರ ಜಿಲ್ಲೆ ಕೇಸರಟ್ಟಿಯ ಸೋಮಲಿಂಗ ಸ್ವಾಮಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಖಾಸಗಿ ಹೊಟೇಲ್‍ನಲ್ಲಿ ಸೋಮವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ಉಪಚುನಾವಣೆ ಪ್ರಚಾರದ ವೇಳೆ ನಳಿನ್ ಕುಮಾರ ಕಟೀಲ್, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅದು ಖಂಡನೀಯ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಜಾತಿ ಹಾಗೂ ಸಮಾಜಗಳ ನಡುವೆ ಬೆಂಕಿ ಹಚ್ಚುತ್ತಿರುವ ನಳಿನಕುಮಾರ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದು ಬುದ್ಧಿ ಹೇಳಲಿ. ಇಲ್ಲದಿದ್ದರೆ ನಮ್ಮ ಸಮಾಜದಿಂದ ಬಿಜೆಪಿಯವರಿಗೆ ಬುದ್ಧಿವಾದ ಹೇಳುವ ದಿನಗಳು ಬರಲಿವೆ ಎಂದರು.
ನಾಗಠಾಣ ಮತಕ್ಷೇತ್ರ ಶಾಸಕ ದೇವಾನಂದ ಚವ್ಹಾಣ ಅವರು ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಯಾಗಲು ಶಿಫಾರಸ್ಸು ಮಾಡುವಂತೆ ಪ್ರಚಾರದ ವೇಳೆ ನಳಿನಕುಮಾರ ಕಟೀಲ ಹೇಳಿಕೆ ನೀಡಿರುವುದು ಕೇವಲ ಮತ ಓಲೈಕೆಗಾಗಿ ಹೇಳಿರುವುದನ್ನು ಖಂಡಿಸಿದರು. ದಲಿತ ಸಮಾಜ ಒಂದು ಜಾತಿಗೆ ಸೀಮಿತವಾಗಿಲ್ಲ. ನೂರು ಸಮಾಜ ಸೇರಿ ದಲಿತ ಸಮಾಜವಾಗಿದೆ ಎಂದರು.
ಡಾ. ಬಾಬು ರಾಜೇಂದ್ರ ರವರು ಮಾತನಾಡಿ, ಸದಾಶಿವ ಆಯೋಗದ ವರದಿ ಮೊದಲಿಗೆ ಬಹಿರಂಗ ಪಡಿಸಲಿ ತದ ನಂತರ ಸೂಕ್ತ ಚರ್ಚೆ ಮಾಡಿ ಅದನ್ನು ತಿರಸ್ಕರಿಸುವುದೋ ಅಥವಾ ಸ್ವೀಕರಿಸುವುದೋ ಎಂಬುದನ್ನು ಸರ್ಕಾರ ಕೈಗೆತ್ತಿಕೊಳ್ಳಲಿ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ್ ಮಹಾರಾಜರು, ಡಾ. ಬಾಬು ರಾಜೇಂದ್ರ, ಬಿ.ಬಿ. ಲಮಾಣಿ, ಶಂಕರ್ ಚವ್ಹಾಣ, ಡಾ. ಅರವಿಂದ್ ಚವ್ಹಾಣ, ಸುರೇಶ ಬಿಜಾಪುರ, ಸಂಜೀವ ಜಾಧವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.