ಲಂಬಾಣಿಗರದು ಶ್ರೀಮಂತ ಸಂಸ್ಕೃತಿ, ಪರಂಪರೆ: ಕಠಾರಿನಾಯ್ಕ್


(ಸಂಜೆವಾಣಿ ವಾರ್ತೆ)
ಹೂವಿನಹಡಗಲಿ, ಫೆ.10: ತನ್ನ ಉಡುಗೆ, ತೊಡುಗೆ,ಭಾಷೆ, ಜೀವನ ವಿಧಾನಗಳಿಂದ ದೇಶದ ಬುಡಕಟ್ಟುಗಳಲ್ಲಿ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿರುವುದು ಲಂಬಾಣಿ ಜನಾಂಗವಾಗಿದೆಂದು ಪಟ್ಟಣದ ದಂತ ವೈದ್ಯ, ಕಲಾವಿದ ಡಾ.ಎಲ್.ಪಿ.ಕಠಾರಿನಾಯ್ಕ್ ಅಭಿಪ್ರಾಯಪಟ್ಟರು.
ಅವರು  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಇಟ್ಟಿಗಿ ಹೋಬಳಿ ಘಟಕ ವರಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಮತಿ ಉಮ್ಲಿಬಾಯಿ ಥಾವರ್ಯ ನಾಯ್ಕ ಸ್ಮಾರಕದತ್ತಿ, ಶ್ರೀಮತಿ ಕೌಸಲ್ಯಾಬಾಯಿ ದೇವೇಂದ್ರನಾಯ್ಕ ಪ್ರದೀಪ, ಪಲ್ಲವಿ ದತ್ತಿ ಹಾಗೂ ಶ್ರೀಮತಿ ಲಕ್ಷ್ಮಿಬಾಯಿ ಪುರುಷೋತ್ತಮರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಂಜಾರರು ಕರ್ನಾಟಕ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಹರಡಿಕೊಂಡಿದ್ದಾರೆ. ಪ್ರಪಂಚದ 144 ದೇಶಗಳಲ್ಲಿ ಈ ಜನಾಂಗದವರಿದ್ದಾರೆ. ಎಲ್ಲರೂ ಆಡುವ ಭಾಷೆ ಒಂದೇ ಅದು ಗೋರ್ ಬೋಲಿ.ಇಂಡೋ ಆರ್ಯನ್ ಜನಾಂಗಕ್ಕೆ ಸೇರಿದವರಾದ ಇವರು ಸಿಂಧೂ ನದಿಯ ನಾಗರಿಕತೆಯ ಪಟ್ಟಣಗಳಾದ ಹರಪ್ಪ ಮತ್ತು ಮಹೆಂಜೋದಾರ್ ಗಳಲ್ಲಿ ಮೋಹನನಾಯ್ಕನ ತಾಂಡ,ಹರಪ್ಪನ ತಾಂಡ ಗಳಲ್ಲಿ ಈ ಜನಾಂಗ ವಾಸಿಸುತ್ತಿದ್ದ ಕುರುಹುಗಳಿದ್ದವು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ ಎಂದರು. ರಾಥೋಡ್ ಚೌಹಾನ್, ಪವಾರ್, ಜಾಧವ್ ಕುಲಗಳಿದ್ದು, ಅನೇಕ ಗೋತ್ರಗಳನ್ನು ಹೊಂದಿವೆ. ಮುತ್ತು,ರತ್ನ ವ್ಯಾಪಾರ,ಪಶು ಸಂಗೋಪನೆ, ಧೈರ್ಯ, ಸ್ವಾಭಿಮಾನಕ್ಕೆ ಹೆಸರಾದ ಸಮುದಾಯ ಬ್ರಿಟಿಷರ ಅವಕೃಪೆಗೆ ಒಳಗಾಗಿ 1871ರಲ್ಲಿ ಕ್ರಿಮಿನಲ್
 ಆಕ್ಟ್ ನಡಿ ಆಪಾದಿತರಾಗಿ ಕಾಡು ಸೇರಿದ್ದು ಇತಿಹಾಸದ ದುರಂತ ಎಂದರು. ಹಬ್ಬ, ಹರಿದಿನ,ಮದುವೆ ಇತ್ಯಾದಿ ಸಮಾರಂಭಗಳಲ್ಲಿ ತನ್ನ ಹಾಡು, ನೃತ್ಯ,ವಿಶಿಷ್ಟ ವೈವಿಧ್ಯಮ ಆಚರಣೆಗಳಿಂದ ಈ ಸಮುದಾಯ ಹೆಸರಾಗಿದೆ ಎಂದರು. ಸ್ವಾತಂತ್ರ್ಯದ ನಂತರ ಸರಕಾರಿ ಸೌಲಭ್ಯಗಳ ನೆರವಿನಿಂದ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳ ಉನ್ನತ ಸೇವೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವೆಂದರು. ಕಸಾಪ ಮಾಜಿ ಅಧ್ಯಕ್ಷರು, ದತ್ತಿ ದಾನಿಗಳಾದ ಕೌಸಲ್ಯ ದೇವೇಂದ್ರನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಬಂಜಾರ ಜನಾಂಗದ ಸಂಸ್ಕೃತಿ ಎಲ್ಲರಿಗೂ ಪರಿಚಯವಾಗಲೆಂದು ಈ ವಿಷಯದ ದತ್ತಿ ನೀಡಿರುವುದಾಗಿ ತಿಳಿಸಿ, ವಿದ್ಯಾರ್ಥಿಗಳು ಆದರ್ಶದ ನಡೆ,ನುಡಿಗಳನ್ನು ರೂಢಿಸಿಕೊಳ್ಳಬೇಕೆಂದು ಕವನ ವಾಚಿಸುವುದರ ಮೂಲಕ ತಿಳಿಸಿದರು. ಶಾಲೆಯ ಪ್ರಾಚಾರ್ಯ     ಜಿ.ಬಸವರಾಜ ಮಾತನಾಡಿ ಇಂಥದೊಂದು ಉಪಯುಕ್ತ ಕಾರ್ಯಕ್ರಮವನ್ನು ನೀಡಿದ ಕಸಾಪ ನಡೆಯನ್ನು  ಶ್ಲಾಘಿಸಿ, ಕಸಾಪ ಸಂಘಟಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ತಿಳಿಸಿದರು.
ಪರಿಷತ್ತಿನ  ತಾಲೂಕು ಘಟಕದ ಅಧ್ಯಕ್ಷ  ಟಿ.ವೀರೇಂದ್ರ ಪಾಟೀಲ್ ಕಾರ್ಯಕ್ರಮದ ವಿಶಿಷ್ಟತೆಯ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯರಾಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹೆಚ್. ಜಿ. ಪಾಟೀಲ್, ಇಟ್ಟಿಗಿ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ನಿಂಗರಾಜ್,ಶಾಲೆಯ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು, ಪ್ರಾಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಲಂಬಾಣಿ ನೃತ್ಯ ಎಲ್ಲರ ಮನಸೂರೆಗೊಂಡಿತು. ಸುನಿಲ್ ನಾಯ್ಕರ ಜಾನಪದ ಹಾಡುಗಾರಿಕೆ ಮೆಚ್ಚುಗೆ ಪಡೆಯಿತು. ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಗೀತ ಶಿಕ್ಷಕ ಬಿ.ಯುವರಾಜಗೌಡ ಸ್ವಾಗತಿಸಿದರು.ವಿ.ಭೀಮಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸೈಯದ್ ತೋಫಿಕ್ ವಂದಿಸಿದರು. ಶಿಕ್ಷಕ ಬಸವರಾಜ ರೊಟ್ಟಿ ಕಾರ್ಯಕ್ರಮ ನಿರ್ವಹಿಸಿದರು.