ಲಂಡನ್‌ನಲ್ಲಿ ಶ್ರೀಚಂದ್ ಹಿಂದೂ ಜಾ ನಿಧನ

ಲಂಡನ್, ಮೇ.೧೮-ಭಾರತ ಮೂಲದ ಕೋಟ್ಯಧಿಪತಿ, ವಿಶ್ವ ಪ್ರಸಿದ್ಧ ಉದ್ಯಮಿ ಹಾಗೂ ಬ್ರಿಟನ್‌ನ ಶ್ರೀಮಂತ ಕುಟುಂಬದ ಶ್ರೀಚಂದ್ ಪರಮಾನಂದ ಹಿಂದುಜಾ (೮೭) ಲಂಡನ್‌ನಲ್ಲಿ ನಿಧನರಾದರು.
ನಾಲ್ವರು ಹಿಂದೂಜ ಸಹೋದರರ ಪೈಕಿ ಹಿರಿಯ ಹಾಗೂ ಹಿಂದೂಜ ಸಮೂಹದ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದೂಜ ಅವರಿಗೆ ೮೭ ವರ್ಷ ಆಗಿತ್ತು. ಸ್ವಲ್ಪ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನ ಕುರಿತು ಮಕ್ಕಳಾದ ಶಾನು ಹಾಗೂ ವಿನೂ ಹಿಂದುಜಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಶ್ರೀಚಂದ್ ಹಾಗೂ ಅವರ ತಮ್ಮ ಗೋಪಿಚಂದ್ ಅವರು ೨೦೨೨ರಲ್ಲಿ ಸಂಡೆ ಟೈಮ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಸತತ ನಾಲ್ಕನೇ ಬಾರಿಗೆ ಅಗ್ರಸ್ಥಾನ ಪಡೆದಿದ್ದರು. ಅವರ ಆಸ್ತಿಯ ಅಂದಾಜು ಮೌಲ್ಯ ೨.೯೬ ಲಕ್ಷ ಕೋಟಿ.
ಅವರು ಹಲವಾರು ಕಂಪನಿಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕಿಂಗ್, ರಾಸಾಯನಿಕಗಳು, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ವಾಹನಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳನ್ನು ಮುನ್ನಡೆಸಿದ್ದರು.
ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬೊಪೋರ್ಸ್ ಹಗರಣದಲ್ಲಿ ಶ್ರೀಚಂದ್ ಹಾಗೂ ಅವರ ಇಬ್ಬರು ತಮ್ಮಂದಿರಾದ ಗೋಪಿಚಂದ್ ಹಾಗೂ ಪ್ರಕಾಶ್ ವಿರುದ್ಧ ಆರೋಪ ಕೇಳಿಬಂದಿತ್ತು.
ಸ್ವೀಡನ್ ಮೂಲದ, ಫಿರಂಗಿ ತಯಾರಕ ಕಂಪನಿ ಎ.ಬಿ.ಬೋಫೋರ್ಸ್‌ಗೆ ಭಾರತದ ಸರ್ಕಾರದ ಗುತ್ತಿಗೆಯನ್ನು ಕೊಡಿಸಲು ಅಕ್ರಮವಾಗಿ ೬೪ ಕೋಟಿ ಕಮಿಷನ್ ಪಡೆದಿದ್ದ ಆರೋಪ ಇವರ ಮೇಲಿತ್ತು. ಹಿಂದುಜಾ ಸಹೋದರರು ಸೇರಿದಂತೆ ಎಲ್ಲ ಆರೋಪಿಗಳನ್ನು ದೆಹಲಿ ಹೈಕೋರ್ಟ್ ೨೦೦೫ರಲ್ಲಿ ಖುಲಾಸೆಗೊಳಿಸಿತ್ತು.