ಲಂಡನ್‌ನಲ್ಲಿ ಆಂಧ್ರ ಯುವತಿ ಹತ್ಯೆ

ಹೈದರಾಬಾದ್, ಜೂ.೧೫-ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ತೆಲುಗು ನಾಡಿನ ಯುವತಿ ಮೇಲೆ ವಿದೇಶಿ ಯುವಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೈದಿರುವ ದುರ್ಘಟನೆ ನಡೆದಿದೆ.
ಈ ಘಟನೆಯಲ್ಲಿ ಹಲ್ಲೆಗೊಳಗಾಗುತ್ತಿದ್ದ ಯುವತಿಯನ್ನು ಕಾಪಾಡಲೆಂದು ಮುಂದೆ ಹೋದ ಆಕೆಯ ಸ್ನೇಹಿತೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಟುಂಬಸ್ಥರ ನೀಡಿರುವ ಮಾಹಿತಿ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಬ್ರಾಹ್ಮಣಪಲ್ಲಿಯ ತೇಜಸ್ವಿನಿ ರೆಡ್ಡಿ (೨೭) ಮೂರು ವರ್ಷಗಳ ಹಿಂದೆ ಎಂಎಸ್ ಮಾಡಲು ಲಂಡನ್‌ಗೆ ಹೋಗಿದ್ದರು. ಎರಡು ತಿಂಗಳ ಹಿಂದೆ ಕೋರ್ಸ್ ಮುಗಿದಿದ್ದು, ಕಳೆದ ತಿಂಗಳು ಯುವತಿ ಮನೆಗೆ ಮರಳಬೇಕಿತ್ತು. ಕಾರಣಾಂತರಗಳಿಂದ ಆಕೆ ಬರಲಾಗಲಿಲ್ಲ. ಈ ತಿಂಗಳ ಕೊನೆಯ ವಾರದಲ್ಲಿ ಭಾರತಕ್ಕೆ ಆಗಮಿಸಲು ಎಲ್ಲಾ ತಯಾರಿಯೂ ಆಗಿತ್ತು. ತೇಜಸ್ವಿನಿ ಲಂಡನ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.
ಫ್ಲ್ಯಾಟ್‌ನಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ವಾಸಿಸುತ್ತಿದ್ದರು. ಅವರ ಫ್ಲಾಟ್‌ಮೇಟ್‌ಗಳಲ್ಲಿ ಬ್ರೆಜಿಲ್‌ನ ಯುವಕನೂ ಇದ್ದ. ಇಷ್ಟು ವರ್ಷಗಳ ಕಾಲ ಎಲ್ಲರೂ ಒಟ್ಟಿಗೆ ಇದ್ದರು, ಜೊತೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ ಏನಾಯ್ತೋ ಗೊತ್ತಿಲ್ಲ, ತೇಜಸ್ವಿನಿ ಮೇಲೆ ಬ್ರೆಜಿಲ್ ಯುವಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ತೇಜಸ್ವಿನಿ ಸಾವನ್ನಪ್ಪಿದ್ದು, ಆಕೆಯನ್ನು ಕಾಪಾಡಲೆಂದು ಮುಂದಾದ ಆಕೆಯ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿದ್ದು, ಆಕೆ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅಲ್ಲಿನ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಬ್ರೆಜಿಲ್ ಯುವಕನನ್ನು ಬಂಧಿಸಿದ್ದಾರೆ. ತೇಜಸ್ವಿನಿ ಸಾವಿನ ಸುದ್ದಿ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇನ್ನು ೧೫ ದಿನಗಳಲ್ಲಿ ಮಗಳು ಭಾರತಕ್ಕೆ ಬರುತ್ತಾಳೆ ಎಂದು ಕಾತುರದಿಂದ ಕಾಯುತ್ತಿದ್ದೆವು ಎಂದು ಮನದಲ್ಲೇ ಬೇಸರ ವ್ಯಕ್ತಪಡಿಸಿದ್ದಾರೆ.
ಮಗಳ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರುವಂತೆ ತೇಜಸ್ವಿನಿ ಪೋಷಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.