ಲಂಚ ಪ್ರಕರಣ: ಸಹಕಾರ ಸಂಘದ ವ್ಯವಸ್ಥಾಪಕನಿಗೆ ಜೈಲು ಶಿಕ್ಷೆ

ಕಲಬುರಗಿ ಸ 16: ಲಂಚದ ಹಣ ಪಡೆದು ಕಲಬುರಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಚಿತ್ತಾಪುರದ ತಾಲೂಕ
ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ವ್ಯವಸ್ಥಾಪಕ ಬಸವರಾಜ ಮಹಾಂತಪ್ಪ ಗುಳೇದ ಎಂಬ ಆರೋಪಿಗೆ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಲಯ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದೆ .
ಚಿತ್ತಾಪುರದ ಅಂತಯ್ಯ ಸಾತಪ್ಪ ಕಲಾಲ ಎಂಬುವವರು ತಾವು ಹಾಕಿದ ಉದ್ದಿನ ಚೆಕ್‍ಗಳನ್ನು ಕೇಳಲು ಹೋದಾಗ ವ್ಯವಸ್ಥಾಪಕರಾದ ಬಸವರಾಜ ಗುಳೆದ ಇವರು ಒಂದು ಚೆಕ್ಕಿಗೆ ತಲಾ ರೂ.5,000ಗಳಂತೆ ಮೂರು ಚೆಕ್‍ಗಳಿಗೆ ಒಟ್ಟು ರೂ.15,000 ಗಳ ಲಂಚವನ್ನು ನೀಡಲು ಒತ್ತಾಯಿಸಿದ್ದರು.
ಈ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಆಧಾರ ಮೇಲೆ ಕಲಬುರಗಿ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಜೇಮ್ಸ್ ಮಿನೇಜಸ್
ಅವರು 2013 ರ ಮಾರ್ಚ 18 ರಂದು ಪ್ರಕರಣ ದಾಖಲು ಮಾಡಿಕೊಂಡಿದ್ದರು, ಅದೇ ದಿನ ಆರೋಪಿಯು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ನಂತರ ಲೋಕಾಯುಕ್ತ ಪೊಲೀಸರು ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ 2015 ರ ಮೇ 6 ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಧೀಶರಾದ ಆರ್.ಜೆ. ಸತೀಶ ಸಿಂಗ್ ರವರು ಆರೋಪಿತನ ವಿರುದ್ದ ವಿಚಾರಣೆ ನಡೆಸಿ ಆರೋಪ ಸಾಬೀತಾಗಿರುವ ಕಾರಣ,ಆರೋಪಿತನಿಗೆ ಕಲಂ. 7 ಪಿ.ಸಿ ಆಕ್ಟ ನೇದ್ದರಲ್ಲಿ 3 ವರ್ಷ ಶಿಕ್ಷೆ ರೂ. 5,000 ರೂ ದಂಡ, 13(1)(ಡಿ) ಸಂಗಡ 13(2) ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ 3 ವರ್ಷ ಶಿಕ್ಷೆ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಲೋಕಾಯುಕ್ತದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎ.ಎಸ್. ಚಾಂದಕವಟೆ ವಾದವನ್ನು ಮಂಡಿಸಿದ್ದರು