ಲಂಚ ಪಡೆಯುತ್ತಿದ್ದ ತೆರಿಗೆ ನಿರೀಕ್ಷಕರು ಎಸಿಬಿ ಬಲೆಗೆ

ಚಾಮರಾಜನಗರ, ಡಿ.4- ಜಿಎಸ್​​ಟಿ ಕಟ್ಟದ ಅಂಗಡಿ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವಾಣಿಜ್ಯ ತೆರಿಗೆಯ ಇಬ್ಬರು ನಿರೀಕ್ಷಕರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ತೆರಿಗೆ ನಿರೀಕ್ಷಕರಾದ ಅವಿನಾಶ್ ಹಾಗೂ ರವಿಕುಮಾರ್ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಗಳಾಗಿದ್ದಾರೆ.
ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಆಟೋಪಾರ್ಟ್ಸ್ ಅಂಗಡಿಗೆ ಈ ಅಧಿಕಾರಿಗಳು ಭೇಟಿ ಕೊಟ್ಟು ಜಿಎಸ್​ಟಿ ಕಟ್ಟದಿರುವ ಬಗ್ಗೆ ತಗಾದೆ ತೆಗೆದು ದಂಡ ಕಟ್ಟುವಂತೆ ನೋಟಿಸ್ ಕೊಟ್ಟಿರುತ್ತಾರೆ.
ನೋಟಿಸ್ ಸಂಬಂಧ ಅಂಗಡಿ ಮಾಲೀಕ ಜಿಎಸ್​ಟಿ ಕಚೇರಿಗೆ ತೆರಳಿದ ವೇಳೆ, ಜಿಎಸ್​ಟಿ ನೋಂದಣಿ ಮಾಡಿಸದಿರುವುದು ಮತ್ತು ಜಿಎಸ್​ಟಿ ಹಣ ಕಟ್ಟದಿರುವ ನೋಟಿಸ್ ಕ್ಲೋಸ್ ಮಾಡಬೇಕು ಎಂದರೆ 10 ಸಾವಿರ ರೂ. ಲಂಚ ಕೊಡಬೇಕೆಂದು ಒತ್ತಾಯಿಸಿದಾಗ ಮಾಲೀಕ ಎಸಿಬಿ ಮೊರೆ ಹೋಗಿದ್ದರು.ಇಂದು ಜಿಎಸ್​​ಟಿ ಅಧಿಕಾರಿಗಳು 7 ಸಾವಿರ ರೂ‌. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದು ಸದ್ಯ ಇಬ್ಬರನ್ನೂ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.