ಲಂಚತಾಂಡವ ಪರಿಷತ್‌ನಲ್ಲಿ ಗದ್ದಲ

xಬೆಂಗಳೂರು, ಸೆ. ೨೧- ಲಂಚದ ವಿಷಯ ವಿಧಾನಪರಿಷತ್‌ನಲ್ಲಿಂದು ಪ್ರತಿಧ್ವನಿಸಿ ಆಡಳಿತ ಹಾಗೂಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆದು ಕಲಾಪ ನಡೆಸಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಯಿತು.
ಕಾಂಗ್ರೆಸ್‌ನ ಸಲೀಂ ಅಹಮದ್ ಅವರು ಕಂದಾಯ ಸಚಿವ ಆರ್. ಅಶೋಕ್ ರವರಿಗೆ ಕೇಳಿದ ಪ್ರಶ್ನೆಗೆ ಸಚಿವರು ಕಾಲಾವಕಾಶ ಬೇಕಾಗಿದೆ. ಸದಸ್ಯರ ಪ್ರಶ್ನೆಗೆ ಸಮಗ್ರ ಮಾಹಿತಿ ಒದಗಿಸಬೇಕಾಗಿದೆ. ಸಮಯ ಬೇಕು ಎನ್ನುವ ಹೇಳಿಕೆ ಆಡಳಿತ ಹಾಗೂಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ, ಕೋಲಾಹಕ್ಕೆ ಕಾರಣವಾಗಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.ಎರಡೂ ಪಕ್ಷಗಳ ಸದಸ್ಯರಿಂದ ಲಂಚಕ್ಕೆ ಸಂಬಂಧಿಸಿದ ಆರೋಪ ಮತ್ತು ಪ್ರತ್ಯಾರೋಪದಿಂದಾಗಿ ತಾರಕ್ಕಕ್ಕೇರಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.ಇದಕ್ಕೂ ಮುನ್ನ ಸಚಿವ ಅಶೋಕ್ ಪ್ರತಿಕ್ರಿಯಿಸಿ, ಭೂ ಮಂಜೂರಾತಿ, ಭೂ ಪರಿವರ್ತನೆ, ಪಕ್ಕಾಪೋಡಿ, ಆದಾಯ ಜಾತಿ ಪ್ರಮಾಣ ಪತ್ರ, ಪಿಂಚಣಿ, ಜನನ-ಮರಣ ನೋಂದಣಿಗೆ ಸಂಬಂಧಿಸಿದಂತೆ ನಿರ್ದಿಷ್ಠ ದಿನಾಂಕ ನೀಡಿಲ್ಲ. ಹೀಗಾಗಿ ಸಮಗ್ರವಾದ ಮಾಹಿತಿ ನೀಡಬೇಕಾಗಿದೆ. ಕಾಲಾವಕಾಶ ಬೇಕು ಎನ್ನುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಧ್ಯ ಪ್ರವೇಶಿಸಿ, ಇದೊಂದು ಬೇಜವಾಬ್ದಾರಿತನದ ಹೇಳಿಕೆ. ಸಚಿವರ ಬಳಿಯೇ ಉತ್ತರ ಇಲ್ಲದಿದ್ದರೆ ಯಾರ ಬಳಿ ಉತ್ತರ ಇರಲಿದೆ ಎಂದು ತಿರುಗೇಟು ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ನಿಮ್ಮದು ಕೂಡಾ ಬೇಜವಾಬ್ದಾರಿತನದ ವರ್ತನೆ. ನಾವು ವಿರೋಧ ಪಕ್ಷದಲ್ಲಿದ್ದಾಗ ನೀವು ಕೂಡಾ ಇದೇ ರೀತಿ ಮಾಡಿದ್ದೀರಿ ಎಂದು ತಿರುಗೇಟು ನೀಡಿದರು.ಇದರಿಂದಾಗಿ ಹರಿಪ್ರಸಾದ್ ಹಾಗೂ ಅಶೋಕ್ ನಡುವೆ ಬೇಜಾವಾಬ್ದಾರಿತನದ ಹೇಳಿಕೆ ಕುರಿತು ಜಟಾಪಟಿ, ಆರೋಪ-ಪ್ರತ್ಯಾರೋಪ ಮುಗಿಲು ಮುಟ್ಟಿತು.ಈ ವೇಳೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸದಸ್ಯ ಸಲೀಂ ಅಹಮದ್ ಅವರು, ಲಂಚದ ಹಣವನ್ನು ನೀಡದೆ ಯಾವುದೇ ಕೆಲಸ ಕಾರ್ಯ ಆಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ ಎನ್ನುವ ಕುರಿತು ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರ ನೀಡದೆ ಸಚಿವರು ಪಲಾಯನವಾದ ಮಾಡುತ್ತಿದ್ದಾರೆ. ನಾವು ಈ ಸರ್ಕಾರದ ಶೇ. ೪೦ ರಷ್ಟು ಭ್ರಷ್ಟಾಚಾರದ ವಿಚಾರಗಳನ್ನು ಪ್ರಸ್ತಾಪ ಮಾಡಲಿದ್ದೇವೆ. ಈ ವಿಷಯವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಮಧ್ಯ ಪ್ರವೇಶಿಸಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಇದು ಪ್ರಶ್ನೋತ್ತರ. ಪ್ರಶ್ನೋತ್ತರ ನಡೆಸಲು ಅವಕಾಶ ಮಾಡಿಕೊಡಿ ಎಂದು ಪದೇ ಪದೇ ಮನವಿ ಮಾಡಿದರೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಹಂತದಲ್ಲಿ ಎದ್ದು ನಿಂತ ಆಡಳಿತ ಪಕ್ಷದ ಸದಸ್ಯ ವೈ.ಎ,. ನಾರಾಯಣಸ್ವಾಮಿ, ನಿಮ್ಮದು ಶೇ. ೮೫ ರಷ್ಟು ಭ್ರಷ್ಟಾಚಾರದ ಸರ್ಕಾರ. ಇದನ್ನು ರಾಜೀವ್‌ಗಾಂಧಿ ಅವರೇ ಹೇಳಿದ್ದಾರೆ ಎನ್ನುತ್ತಿದ್ದಂತೆಯೇ ಮತ್ತೆ ಆರೋಪ-ಪ್ರತ್ಯಾರೋಪ ಮುಗಿಲು ಮುಟ್ಟಿತು.
ಹರಿಪ್ರಸಾದ್ ಎದ್ದು ನಿಂತು, ವಿಧಾನಪರಿಷತ್ ಸದಸ್ಯರಾಗಿ ೧೫ ಲಕ್ಷ ರೂ. ಬಿಡುಗಡೆ ಮಾಡಿದರೆ ಆ ತೆರಿಗೆ, ಈ ತೆರಿಗೆ ಅಂತ ಹೇಳಿ ೩ ಲಕ್ಷ ಕಡಿತವಾಗಿ ೧೨ ಲಕ್ಷ ಮಾತ್ರ ಸೇರುತ್ತದೆ. ಇದನ್ನೇ ರಾಜೀವ್‌ಗಾಂಧಿ ಹೇಳಿದ್ದಾರೆ. ಅವರಿಗೆ ಧೈರ್ಯವಿತ್ತು ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಚಿವ ವಿ. ಸೋಮಣ್ಣ, ಪ್ರತಿಪಕ್ಷದ ಸದಸ್ಯರು ಹಾಕಿದ ಪ್ರಶ್ನೆಗೆ ಕೆಲವೊಮ್ಮೆ ಸಮಯ ಕೇಳುವುದು ವಾಡಿಕೆ. ಸಮಗ್ರ ಮಾಹಿತಿ ನೀಡಬೇಕಾಗಿರುವುದರಿಂದ ಕಂದಾಯ ಸಚಿವರು ಸಮಯ ಕೇಳಿದ್ದಾರೆ. ಕಂದಾಯ ಸಚಿವರು ಬೇಗ ಉತ್ತರ ನೀಡಲಿ. ಅದರಿಂದ ಸದಸ್ಯರು ತೃಪ್ತರಾಗದಿದ್ದರೆ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಿ. ಈಗ ಪ್ರಶ್ನೋತ್ತರಕ್ಕೆ ಅವಕಾಶ ಕೊಡಲಿ ಎಂದು ಮನವಿ ಮಾಡಿದರು.ಇದರಿಂದ ಆಡಳಿತ ಮತ್ತುಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ನಡೆದು ಸಭಾಪತಿ ರಘುನಾಥ ಮಲ್ಕಾಪುರೆ ಸದನವನ್ನು ಮುಂದೂಡಿದರು.ಮತ್ತೆ ಸದನ ಆರಂಭವಾದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು.
ಈ ಹಂತದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಮೂರು ವರ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೊದಲೇ ಕೇಳಿದ್ದರೆ ಉತ್ತರ ಕೊಡುತ್ತಿದ್ದೆ. ಆದಷ್ಟು ಶೀಘ್ರ ಉತ್ತರ ಕೊಡುವುದಾಗಿ ಭರವಸೆ ನೀಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರು, ಶೀಘ್ರ ಉತ್ತರ ನೀಡಿ ಎಂದು ಸಚಿವರಿಗೆ ಸೂಚಿಸಿದರು.ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸದನದ ಕಲಾಪ ಮುಗಿಯುವುದರೊಳಗೆ ಉತ್ತರ ಕೊಡಿಸಿ ಎಂದು ಮನವಿ ಮಾಡಿದರು.
ಆಗ ಸಭಾಪತಿಗಳು ಶೀಘ್ರ ಉತ್ತರ ಕೊಡಿ ಎಂದು ಸಚಿವರಿಗೆ ಸೂಚಿಸಿ, ಬೇರೆ ಪ್ರಶ್ನೋತ್ತರ ಕೈಗೆತ್ತಿಕೊಂಡರು.

೧೭೦೦ ಕೋಟಿ ರೂ. ಭ್ರಷ್ಟಾಚಾರದ ತನಿಖೆ ಆಗಲಿ
ಸಚಿವ ಅಶ್ವತ್ಥ್‌ನಾರಾಯಣ ವಿರುದ್ಧ ೧೭೦೦ ಕೋಟಿ ರೂ. ಭ್ರಷ್ಟಾಚಾರದ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನಿಖೆ ನಡೆಸುವಂತೆ ಸೂಚಿಸಿದೆ. ಈ ಸಂಬಂಧ ಮೊದಲು ತನಿಖೆಯಾಗಲಿ ಎಂದು ಪ್ರತಿಪಕ್ಷದ ನಾಯಕ ಬಿ.ಕೆ. ಹ ರಿಪ್ರಸಾದ್ ಒತ್ತಾಯಿಸಿದರು.ಭ್ರಷ್ಟಾಚಾರದ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ಸಚಿವ ಅಶ್ವತ್ಥ್‌ನಾರಾಯಣ್, ಭ್ರಷ್ಟಾಚಾರವನ್ನು ಹಾಕಿಕೊಟ್ಟಿದ್ದೆ ನೀವು. ಅದನ್ನು ನಿರ್ಮೂಲನೆ ಮಾಡಲು ನಾವು ಬಂದಿದ್ದೇವೆ ಎನ್ನುವ ಹೇಳಿಕೆ, ಪ್ರತಿಪಕ್ಷದ ನಾಯಕ ಹರಿಪ್ರಸಾದ್ ಮತ್ತು ಸಚಿವ ಅಶ್ವತ್ಥ್‌ನಾರಾಯಣ ಅವರ ನಡುವೆ ಜಟಾಪಟಿ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.
ಸದನವನ್ನು ಸಭಾಪತಿಗಳು ಮುಂದೂಡಿದರು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮುಂದುವರೆದಿತ್ತು.