ಲಂಚ ತಗೊಂಡು ಜೈಲಿಗೆ ಹೋದ ಪಿಎಸ್ಐ ಬಿಡುಗಡೆಯಾಗಿ ಮೆರವಣಿಗೆ ಮಾಡಿಸಿಕೊಂಡ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜ 14 : ಹಲವಾರು ಕಾರಣದ ಅಪರಾದಗಳಿಂದ  ರಾಜಕಾರಣಿಗಳು, ಗೂಂಡಾಗಳು, ಜೈಲಿಗೆ ಹೋಗಿ ನಂತರ ಬಿಡುಗಡೆಯಾದಾಗ ಅವರ ಅಭಿಮಾನಿಗಳು ಮೆರವಣಿಗೆ ಮೂಲಕ ಸ್ವಾಗತಿಸುವುದು ಸಹಜ. ಆದರೆ  ಎರೆಡುವರೆ ಲಕ್ಷ ರೂ ಲಂಚ ಪಡೆದು ಜೈಲಿಗೆ ಹೋಗಿ, ಬಿಡುಗಡೆಯಾದ ಪಿಎಸ್ ಐ ಗೆ ಸಹ ಅಭಿಮಾನಿಗಳು ಮೆರವಣಿಗೆ ಮಾಡಿರುವುದು, ಮಾಡಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಠಾಣೆಯ ಪಿಎಸ್ ಐ  ನಾಗಪ್ಪ. ತಾಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ವೆಂಕಟೇಶ್ ಅವರಿಂದ ಅಕ್ರಮ ಮರಳು ಸಾಗಾಣೆಯ ಟ್ರಾಕ್ಟರ್ ಬಿಡಲು ಮತ್ತು ಕೇಸೊಂದರಲ್ಲಿ ಬಿ ರಿಪೋರ್ಟ್ ಹಾಕಲು 10 ಲಕ್ಷ ಡಿಮ್ಯಾಂಡ್ ಮಾಡಿ, ಎರೆಡು ವರೆ ಲಕ್ಷ ರೂ ಹಣ ಲಂಚ ಪಡೆಯುವಾಗ ಎಸಿಬಿಯಿಂದ ಹಣ ಸಮೇತರಾಗಿ ಬಂದನಕ್ಕೊಳಗಾಗಿದ್ದರು.
ಈಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಕೊಟ್ಟೂರಿಗೆ ಬಂದಾಗ ಅವರ ಅಭಿಮಾನಿಗಳು  ಭರ್ಜರಿ ಸ್ವಾಗತ ನೀಡಿದ್ದಾರೆ. ಅದೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ರೂಪಾಯಿ ಪಟಸಕಿ ಸಿಡಿಸಿ, ಸಿಹಿ ಹಂಚಿ ಅದ್ದೂರಿ ಮೆರವಣಿಗೆ  ಡ್ರಮ್ ಸೆಟ್ ಗಳು, ಜೈಕಾರದ ನಡುವೆ  ಮದ್ಯರಾತ್ರಿ ಭಾರಿ ಮೆರವಣಿಗೆ ಮಾಡಿಸಿಕೊಂಡಿದ್ದಾರೆ ಕೊಟ್ಟೂರಲ್ಲಿ.
ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ಜೈಲುಪಾಲಾದವರಿಗೆ ಇಂತಹ ಅದ್ದೂರಿ ಸ್ವಾಗತ ಬೇಕಿತ್ತಾ ಎಂಬುದು ಕೊಟ್ಟೂರು ಪಟ್ಟಣದ ಜನರ ಅನಿಸಿಕೆಯಾಗಿದೆ.
ರಾಜಕಾರಣಿಗಳಿಗೆ ಸೀಮಿತವಾಗಿದ್ದ ಜೈಲು ಬಿಡುಗಡೆ ಮೆರವಣಿಗೆಯ ಚಟ,  ಈಗ ಲಂಚ ಪಡೆದು ಜಾಮೀನಿನ ಮೇಲೆ ಜೈನಿಂದ ಹೊರ ಬರುವ  ಪೊಲೀಸರಿಗೂ ಬಂದಿದೆ ಎನ್ನಬೇಕಿದೆ.
ಪ್ರಕರಣ ದಾಖಲು
ಪಿಎಸ್ಐ ನಾಗಪ್ಪ ಅವರ ಈ  ಅದ್ದೂರಿ ಮೆರವಣಿಗೆಗೆ ಸಂಬಂಧಿಸಿ ಕೋವಿಡ್ ನಿಯಮ ಉಲ್ಲಂಘನೆಯ ಮೇಲೆ  ನಾಗಪ್ಪ ಸೇರಿದಂತೆ 13 ಜನರ ವಿರುದ್ಧ  ಕೊಟ್ಟೂರು ಠಾಣೆಯಲ್ಲೇ ಕೇಸು ದಾಖಲಾಗಿದೆ.
ಕೂಡ್ಲಿಗಿ ಸಿಪಿಐ ವಸಂತ್ ಅಸೋದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿದೆ