ಲಂಚ ಕೊಟ್ಟರೇ ಮಾತ್ರ ಕೆಲಸ : ಕೂಲಿಕಾರರ ಮೂಲಕ ಸ್ವಚ್ಛತೆಗೆ ನಿಂತ ಸದಸ್ಯರು

ನಗರಸಭೆ : ಅಧಿಕಾರಿಗಳದ್ದೇ ದರ್ಬಾರ್ – ಚುನಾಯಿತ ಸದಸ್ಯರ ಬಗ್ಗೆ ಡೋಂಟ್ ಕೇರ್

 • ರಾಯಚೂರು.ಏ.೨೦- ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಉದ್ದೇಶದ ನಗರಸಭೆಯಲ್ಲಿ ಅಧಿಕಾರಗಳ ದರ್ಬಾರ್ ಮುಂದೆ ಡೋಂಟ್ ಕೇರ್‌ನಂತಾದ ಸದಸ್ಯರು ತಮ್ಮ ವಾರ್ಡ್ ಸ್ವಚ್ಛತೆಗಾಗಿ ಸ್ವಂತ ಖರ್ಚಿನಲ್ಲಿ ಕೂಲಿಕಾರರನ್ನು ನೇಮಿಸಿಕೊಳ್ಳುವ ದುರದೃಷ್ಟಕರ ಆಡಳಿತ ವ್ಯವಸ್ಥೆಯಿಂದ ನಗರ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುವಂತಾಗಿದೆ.
  ನಗರದಲ್ಲಿ ಸ್ವಚ್ಛತಾ ಕಾರ್ಯ ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ. ಪೌರ ಕಾರ್ಮಿಕರ ಮುಷ್ಕರ ಸ್ಥಗಿತಗೊಂಡ ನಂತರವೂ ನಗರ ಸ್ವಚ್ಛತೆ ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ ಯಾವುದೇ ಬಡಾವಣೆ ರಸ್ತೆಗೆ ಹೋದರೂ ತಿಪ್ಪೆ ಗುಂಡಿ ತುಂಬಿರುವುದು ಕಾಣಬಹುದಾಗಿದೆ. ನಾಲೆಗಳ ಸ್ವಚ್ಛತೆ ಕಾರ್ಯ ಕೈಗೊಳ್ಳದಿರುವುದಿಂದ ದುರ್ವಾಸನೆ ಮತ್ತು ಎಲ್ಲೆಂದರೆಲ್ಲಿ ರಸ್ತೆಗೆ ನೀರು ಹರಿಯುವ ದುಸ್ಥಿತಿ ಇದು ಗ್ರೇಡ್-೧ ನಗರವೇ ಜನ ಪ್ರಶ್ನಿಸುವಂತೆ ಮಾಡಿದೆ.
  ಈ ಪರಿಸ್ಥಿತಿ ಒಂದೆಡೆಯಿದ್ದರೇ, ಮತ್ತೊಂದೆಡೆ ನಗರಸಭೆ ಸದಸ್ಯರ ಸ್ಥಿತಿಯಂತೂ ಇನ್ನೂ ದಯಾನೀಯವಾಗಿದೆ. ತಮ್ಮ ವಾರ್ಡ್ ಸ್ವಚ್ಛತೆಗಾಗಿ ಖಾಸಗಿ ಕೂಲಿಕಾರರನ್ನು ಕರೆತಂದು ಚರಂಡಿ ಸ್ವಚ್ಛಗೊಳಿಸಿಕೊಳ್ಳುವ ಪರಿಸ್ಥಿತಿ ಬಂದೋದಗಿದೆ. ವಾರ್ಡ್ ೪ ರ ನಗರಸಭೆ ಸದಸ್ಯರಾದ ಬಿ.ರಮೇಶ ಅವರು ಇಂದು ತಮ್ಮ ವಾರ್ಡ್ ಚರಂಡಿ ಸ್ವಚ್ಛತೆಯನ್ನು ಖಾಸಗಿ ಕೂಲಿಕಾರರಿಂದ ನಿರ್ವಹಿಸಿಕೊಂಡಿರುವುದು ನಗರಸಭೆಯ ಆಡಳಿತ ವ್ಯವಸ್ಥೆಯ ದುಸ್ಥಿತಿ ತೆರೆದಿಟ್ಟಿದೆ. ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ೩೫ ಸದಸ್ಯರು ಮತ್ತು ಸಂಸದ ರಾಜಾ ಅಮರೇಶ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್ ಸಹ ಸದಸ್ಯರಾಗಿದ್ದು, ಇಲ್ಲಿ ಚುನಾಯಿತ ಸಮಿತಿಯನ್ನೇ ನಿರ್ಲಕ್ಷ್ಸಿಸಿ, ಅಧಿಕಾರಿಗಳು ತಮ್ಮದೇ ದರ್ಬಾರ್ ನಡೆಸುತ್ತಿರುವುದು ಸದಸ್ಯರನ್ನು ತೀವ್ರ ಆಕ್ರೋಶ ಗುರಿ ಮಾಡಿದೆ.
  ಒಂದು ಪ್ಯಾಕೇಜಿನಲ್ಲಿ ೪೦ ಜನ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸಬೇಕು. ಆದರೆ, ಸರಿಸುಮಾರು ೨೦ ರಿಂದ ೨೨ ಜನ ಕಾರ್ಮಿಕರು ಗೈರಾದರೂ, ಇದನ್ನು ಆಯುಕ್ತರು ಅಥವಾ ಪರಿಸರ ಅಭಿಯಂತರರು ಪ್ರಶ್ನಿಸಿದೇ ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಬಿ.ರಮೇಶ ಅವರು ಆರೋಪಿಸಿದ್ದಾರೆ. ಕಳೆದ ಆರು ತಿಂಗಳಿಂದ ಇ-ಖಾತೆ ಅರ್ಜಿ ಸಲ್ಲಿಸಿದವರಿಗೂ ಖಾತೆಗಳು ನೀಡುತ್ತಿಲ್ಲ. ಆಯುಕ್ತರು ನಗರಸಭೆಯಲ್ಲಿ ಜನಪ್ರತಿನಿಧಿಗಳನ್ನು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂದು ಭಾವಿಸಿದಂತಿದೆ.
  ಅಭಿವೃದ್ಧಿ ಕಾಮಗಾರಿಗಳ ಕಡತಕ್ಕೆ ಸಹಿ ಮಾಡುವುದಿಲ್ಲ. ದುಡ್ಡು ಕೊಟ್ಟವರಿಗೆ ಖಾತೆಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳ ವಿರುದ್ಧ ಯಾರು ಮಾತನಾಡದ ಒತ್ತಡದ ಪರಿಸ್ಥಿತಿ ಇದೆ. ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬಂದಾಗಲಿಂದ ಯಾವುದೇ ಕೆಲಸ ಕಾರ್ಯ ನಡೆಯದೇ ವಾರ್ಡ್ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ನಗರಸಭೆಯಲ್ಲಿ ಹಣ ನೀಡಿದರೇ ಮಾತ್ರ ಕೆಲಸವಾಗುತ್ತದೆ ಇಲ್ಲದಿದ್ದರೇ ಇಲ್ಲ ಎನ್ನುವ ವಾತಾವರಣ ನಿರ್ಮಾಣಗೊಂಡಿದೆ. ಪ್ರಭಾರಿ ಆಯುಕ್ತರ ವ್ಯವಸ್ಥೆ ಬದಲಾಗಿ ಖಾಯಂ ಆಯುಕ್ತರನ್ನು ಏಕೆ ನಿಯುಕ್ತಿಗೊಳಿಸುತ್ತಿಲ್ಲವೆಂದು ಪ್ರಶ್ನಿಸಿದರು.
  ಚುನಾಯಿತ ಸಮಿತಿಯನ್ನು ಅತ್ಯಂತ ದುರ್ಬಲಗೊಳಿಸಲಾಗುತ್ತಿದೆ. ಆಯುಕ್ತರು ಚುನಾಯಿತ ಸಮಿತಿಯ ಮತ್ತು ನಗರಸಭೆ ಸದಸ್ಯರ ಬೇಡಿಕೆಗಳಿಗೆ ಯಾವುದೇ ಮಾನ್ಯತೆ ನೀಡುತ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳ ಮೇಲೆ ಅತ್ಯಂತ ತೀವ್ರ ಪರಿಣಾಮ ಬೀರುವಂತಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿ ಕೆಲಸಗಳನ್ನು ಕೂಲಿಕಾರರನ್ನು ಇಟ್ಟು ನಿರ್ವಹಿಸಿಕೊಳ್ಳುವಂತಹ ಪರಿಸ್ಥಿತಿ ಬಂದೋದಗಿದೆ. ಈ ರೀತಿ ಎಲ್ಲಿವರೆಗೂ ನಿರ್ವಹಿಸಲು ಸಾಧ್ಯವಾಗುತ್ತದೆ. ನಗರಸಭೆ ಅಧಿಕಾರಿಗಳು ತಕ್ಷಣವೇ ಚುನಾಯಿತ ಸಮಿತಿಯ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ, ನಗರದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರಗೊಳ್ಳಲಿದೆಂದು ಎಚ್ಚರಿಸಿದರು.
  ಒಟ್ಟಾರೆಯಾಗಿ ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ಯತ್ತ ಸಾಗಿದೆ ಎನ್ನುವುದೇ ತಿಳಿಯದಾಗಿದೆ. ಸ್ವತಃ ನಗರಸಭೆ ಸದಸ್ಯರು ನಗರಸಭೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮಟ್ಟಿಗೆ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಅಧಿಕಾರಿಗಳು ಮತ್ತು ಚುನಾಯಿತ ಸಮಿತಿಯ ಮಧ್ಯೆ ಹೊಂದಾಣಿಕೆ ಸಮಸ್ಯೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವ ದುಸ್ಥಿತಿಗೆ ದಾರಿ ಮಾಡಿದೆ.