ಲಂಕೇಶ್ ಸಾಹಿತ್ಯ ಸಪ್ತಾಹ ಸಮರೋಪ

ಕೋಲಾರ,ಮಾ.೩೦:ಸಾಹಿತಿ ಪಿ.ಲಂಕೇಶರ ಸಾಹಿತ್ಯ ಸಪ್ತಾಹ ಸಮಾರೋಪ ಹಾಗೂ ರಂಗ ವಿಜ್ಞಾನಿ ಹಾಲ್ಕುರ್ಕೆ ಶಿವಶಂಕರ್ ನೆನಪಿನ ಹುಣ್ಣಿಮೆ -೧೭೧ ಹುಳಿ ಮಾವಿನ ಮರವ ಸಿಹಿ ಮಾವಿನ ಮರವಾಗಿಸಿದ ಆದಿಮ ಡಾ.ರಾಜಪ್ಪ ದಳವಾಯಿ ಆದಿಮ ಸಾಂಸ್ಕೃತಿಕ ಕೇಂದ್ರ ಹಾಗೂ ಸಂಸ ಥಿಯೇಟರ್, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಮಾ.೨೨ ರಿಂದ ೨೮ ರವರೆಗೆ ನಾಡಿನ ಪ್ರಸಿದ್ಧ ಸಾಹಿತಿ ಪಿ.ಲಂಕೇಶ್ ರ ಸಾಹಿತ್ಯ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿ ದಿನ ಎರಡು ಗೋಷ್ಠಿಗಳು; ಚರ್ಚೆ-ಸಂವಾದ, ಚಿತ್ರೋತ್ಸವ, ಹಾಡುಗಾರಿಕೆ ನಡೆಯಿತು. ಇಂತಹ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಚಳವಳಿಗಳ ತವರಾದ ಕೋಲಾರಕ್ಕೆ, ವಿಶೇಷವಾಗಿ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಸಾಹಿತ್ಯ ಕಣ್ಣೂ ಇದೆ ಎಂದು ನಿರೂಪಿಸಿಕೊಂಡಿದೆ. ಸಂಸ ಥಿಯೇಟರ್ ಜೊತೆಯಾಗಿ ಕಾರ್ಯಕ್ರಮ ನಡೆಯಿತು.
ಅಂತಿಮ ಗೋಷ್ಠಿಯಲ್ಲಿ ಲಂಕೇಶ್ ಮತ್ತು ತಾಯ್ತನ ಕುರಿತು ವಿಷಯ ಮಂಡಿಸಿದ, ಸಾಹಿತಿ ಡಾ.ಹೆಚ್.ಎಸ್.ಅನುಪಮಾವರು, ಆದಿಮ ಸುಂದರ ಪರಿಸರದ ನಡುವೆ ಕಲೆಕ್ಟಿವಿಟಿ ಮತ್ತು ಕಂಟಿನ್ಯುಟಿ ಎರಡಕ್ಕೂ ಸಂಕೇತವಾಗಿದೆ ಅನಿಸುತ್ತದೆ. ತಿಂಗಳಾನುಗಟ್ಟಲೆ ರೈತ, ನೆಲ ಉಳುವವನಿಗೆ ಸೇರಬೇಕೆಂದು ಹೋರಾಟದಲ್ಲಿ ತೊಡಗಿದ್ದಾನೆ. ಜನರ ಹಣದಲ್ಲಿ ಬಾದಾಮಿ, ಗೋಡಂಬಿ ತಿನ್ನುತ್ತಾ ರಾಜಕಾರಣಿಗಳು ಲಂಪಟತನದ ಚರ್ಚೆಯಲ್ಲಿ ತೊಡಗಿದ್ದಾರೆ ಎಂದರು. ಮಾತಿಗಿಂತ ಇವತ್ತು ಮೌನ ಕಾಡುತ್ತಿದೆ. ಲಂಕೇಶರು ಇದ್ದಿದ್ದರೆ ಜೈಲಲ್ಲಿರುತ್ತಿದ್ದರೊ ಏನೊ. ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಪುಲೆ ಕಾಲದ ಬರೆಹಗಳನ್ನು ಗಮನಿಸಿದಾಗ ಇವತ್ತಿಗೂ ಪರಿಸ್ಥಿತಿ ಅಂದಿನಂತೆ ಇದೆ. ಬಹುಶಃ ಸಮಾಜ ಇರುವವರೆಗೂ ಇವೆಲ್ಲಾ ಇರುತ್ತವೆ ಎಂದು ಹೇಳಿದರು. ಜನರನ್ನು ಬಡಿದೆಬ್ಬಿಸುವ ಎಚ್ಚರವಂತರು ಬೇಕಾಗುತ್ತದೆ. ಅದೇ ಸರಣಿಗೆ ಸೇರಿದ ಲಂಕೇಶರು ಪತ್ರಿಕೆ ಹಾಗೂ ಸಾಹಿತ್ಯದಲ್ಲಿ ಮೌಲ್ಯವಾದದ್ದು ಅಂದರೆ ತಾಯ್ತನ. ಅದೊಂದು ಹೂವು ವಸಂತ ಕಾಲಕ್ಕೆ ಚಿಗುರಿ ಸಹಜವಾಗಿ ಅರಳುವುದು. ಯಾರಿಗೆ ಯಾವಾಗ ತಾಯ್ತನ ತೋರಿಸಬೇಕು ಅಂದರೆ, ನಮ್ಮ ಕುಟುಂಬದವರಿಗೆ ತೋರಿಸುವುದಲ್ಲ. ಬದಲಾಗಿ ಪೌರ ಕಾರ್ಮಿಕರೊ, ಆಪತ್ತಿನಲ್ಲಿರುವ ಬಡವರಿಗೆ ತಾಯ್ತನ ತೋರಿಸಿಬೇಕು. ಹೆಣ್ಣಾದ ಕೂಡಲೆ ತಾಯಿ ಆಗುತ್ತಾಳೆ ಎಂದುಕೊಳ್ಳುವುದು ಅಷ್ಟು ಸರಿ ಅಲ್ಲ. ಪುರುಷರಲ್ಲಿಯೂ ತಾಯ್ತನ ಇರುತ್ತದೆ ಎಂದರು. ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ,
ಸಮಾರೋಪ ನುಡಿಗಳನ್ನಾಡಿದ ನಾಡಿನ ಖ್ಯಾತ ನಾಟಕಾರ ಡಾ.ರಾಜಪ್ಪ ದಳವಾಯಿ, ಇದೊಂದು ಮಹತ್ವದ ಸಪ್ತಾಹ. ಸತತವಾಗಿ ನಡೆಸಿರುವ ಗೋಷ್ಠಿಗಳು ನಿಜಕ್ಕೂ ಮಹತ್ವವಾದ ಚರ್ಚೆಗಳ ನಡೆದಿವೆ ಎಂದರು.
ಮುಖ್ಯ ಅಥಿತಿಗಳಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ಆದಿಮ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಖುಷಿ ತಂದಿದೆ. ಆದಿಮದಲ್ಲಿ ಇನ್ನೂ ಹೆಚ್ಚೆಚ್ಚು ಇಂಥ ಕಾರ್ಯಕ್ರಗಳು ಆಗಲಿ, ಪುಸ್ತಕ ಪ್ರಕಟಣೆಗಳು ಆಗಲಿ ಎಂದರು.
ಮತ್ತೋರ್ವ ಅತಿಥಿ ನಗರಸಭೆ ಸದಸ್ಯ ಎನ್.ಅಂಬರೀಶ್ ಮಾತನಾಡಿ, ಆದಿಮ ಸಂಸ್ಥೆ ಲಂಕೇಶರ ಬಗ್ಗೆ ನಡೆಸಿರುವ ಈ ಕಾರ್ಯಕ್ರಮ ನಿಜಕ್ಕೂ ಇವತ್ತಿನ ರಾಜಕೀಯ ದಿನಮಾನಕ್ಕೆ ಬೇಕಾಗಿರುವಂತದ್ದು. ಲಂಕೇಶ್ ಬಹಳ ನೇರ ನಿಷ್ಠುರ ಸಾಮಾಜಿಕ ಕಳಕಳಿ ಇದ್ದವರು. ಭಾರತದ ಪ್ರಧಾನಿಗಳು ಕಛೇರಿಗೆ ಬರುತ್ತೇನೆ ಎಂದರೆ ನೀವು ಬರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಪ್ರಧಾನಿಗಳನ್ನು ಭೇಟಿ ಮಾಡಿದ್ದರು ಎಂದರು. ಕಾಂಗ್ರೆಸ್ ಮುಖಂಡ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿದರು.
ಕೊಮ್ಮಣ್ಣ ಆದಿಮ ನಡೆದು ಬಂದ ದಾರಿಯನ್ನು ಸ್ಮರಿಸಿಕೊಂಡರು.ಕಾರ್ಯಕ್ರಮದಲ್ಲಿ ರಾಜ್ಯ ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ, ಹ.ಮಾ.ರಾಮಚಂದ್ರ ಇದ್ದರು. ಕಲಾವಿದ ಕಾಳಿದಾಸ್ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಕೊನೆಯ ಭಾಗವಾಗಿ ಹುಣ್ಣಿಮೆ ಹಾಡು -೧೭೧ ರಲ್ಲಿ ಪಿ.ಲಂಕೇಶರು ರಚಿಸಿದ ಏಕಾಂಕ ನಾಟಕ ಪೊಲೀಸರಿದ್ದಾರೆ ಎಚ್ಚರಿಕೆ ರಂಗಧರ್ಮ ತಂಡ ಬೆಂಗಳೂರು ಪ್ರದರ್ಶಿಸಿತು. ನಿರ್ದೇಶಕರಾದ ಪ್ರದೀಪ್ ತಿಪಟೂರು ತನ್ನದೇ ವಿಶಿಷ್ಟ ಶೈಲಿಯಲ್ಲಿ ನಾಟಕಗಳನ್ನು ನಿರ್ದೇಶಿಸಿ ಆಧುನಿಕ ರಂಗಭೂಮಿಗೆ ಗುರುತಾಗಿದ್ದಾರೆ. ಸಖಾರಾಂ ಬೈಂಡರ್ ಅನುವಾದಿತ ಮರಾಠಿ ನಾಟಕ, ಡಿ.ಎಸ್.ಚೌಗಲೆ ಅವರ ’ಶುದ್ಧವಂಶ ಬೆಂಗಳೂರಲ್ಲಿ ಪ್ರದರ್ಶಿಸಿದೆ. ಈ ಹಿಂದೆ ೨೦೦೬ರಲ್ಲಿ ಕೋಲಾರದಲ್ಲಿ ಪಿ.ಲಂಕೇಶರ ’ಸಂಕ್ರಾಂತಿ’ ನಾಟಕ ನಿರ್ದೇಶಿಸಿ ಜನಮನ್ನಣೆ ಗಳಿಸಿಕೊಂಡಿದ್ದರು. ಆದಿಮಕ್ಕೆ ಹೊಸತೇನೂ ಅಲ್ಲದ ಪ್ರದೀಪ್ ತಿಪಟೂರು ಪಿ.ಲಂಕೇಶರ ಸಾಹಿತ್ಯ ಸಪ್ತಾಹದಲ್ಲಿ ಪಾಲ್ಗೊಂಡಿದ್ದರು.
ವಿಶೇಷವೆಂದರೆ ನಾಟಕದ ಸಮಯಕ್ಕೆ ವಿದ್ಯುತ್ ಸರಬರಾಜು ಕಡಿತವಾಗಿತ್ತು. ಏಳೆಂಟು ಮೊಬೈಲ್ ಟಾರ್ಚ್ ಬೆಳಕಲ್ಲಿ ನಾಟಕ ನಡೆಯಿತು. ಹರಿತವಾದ ಸಂಭಾಷಣೆಯುಳ್ಳ ಪೊಲೀಸರಿದ್ದಾರೆ ಎಚ್ಚರಿಕೆ ನಾಟಕವನ್ನು ಮೂರು ಜನ ಕಲಾವಿದರು ಕಣ್ಣಿಗೆ ಕಟ್ಟಿದಂತೆ ಅಭಿನಯಿಸಿ ತೋರಿಸಿದರು. ಒಬ್ಬ ವ್ಯಕ್ತಿ ಹೇಗೆ ಪರಿಸ್ಥಿತಿಗಳಿಂದ ವಿಕಸಿತನಾಗಿ, ಅಸ್ವಸ್ಥನಾಗುತ್ತಾನೆ. ಮನಸ್ಥಿತಿಗಳು ಮನುಷ್ಯನನ್ನು ಹೇಗೆ ಪೀಡಿಸುತ್ತವೆ. ಸಮಾಜದ ಮೌಲ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ನಾಟಕ ಎಚ್ಚರಿಸುತ್ತದೆ. ನಿರ್ದೇಶನವನ್ನು ತನ್ನದೇ ಆದ ಮಾದರಿಯಲ್ಲಿ ಪ್ರದೀಪ್ ತಿಪಟೂರ್ ಮಾಡಿದ್ದರು.