ಲಂಕಾ ವಿರುದ್ಧ ಭಾರತಕ್ಕೆ 4 ವಿಕೆಟ್ ಗೆಲುವು: ರೋಹಿತ್ ಪಡೆಗೆ ಒಡಿಐ ಸರಣಿ ಜಯ

ಕೊಲ್ಕತ್ತ, ಜ.12-ಕೆ.ಎಲ್. ರಾಹುಲ್ ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಇಂದು ಇಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಮೂಲಕ ಮೂರು ಪಂದ್ಯಗಳ ಪೈಕಿ ಭಾರತ 2-0 ಯಿಂದ ಸರಣಿ ಕೈವಶ ಮಾಡಿಕೊಂಡಿದೆ.
ಗೆಲುವಿಗೆ ಅಗತ್ಯವಿದ್ದ 216 ರನ್ ಗಳ ಬೆನ್ನಹತ್ತಿದ ಭಾರತ 43.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ರಾಹುಲ್, ಅಜೇಯ 63, ಹಾರ್ದಿಕ್ ಪಾಂಡ್ಯ 36, ಅಕ್ಸರ್ ಪಟೇಲ್ 21, ಶ್ರೇಯಸ್ ಅಯ್ಯರ್ 28, ಶಭ್ ಮನ್ ಗಿಲ್ 21, ರೋಹಿತ್ ಶರ್ಮಾ 17 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕೊಹ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ರಾಹುಲ್ ಮತ್ತು ಪಾಂಡ್ಯ ಉತ್ತಮ ಜತೆಯಾಟ ತಂಡದ ಗೆಲುವಿಗೆ ಸಹಕಾರಿಯಾಯಿತು. ಲಂಕಾ ಪರ ಲಹಿರು ಕುಮಾರ ಹಾಗೂ ಕಸುನ್ ರಜಿತಾ ತಲಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು ಭಾರತೀಯ ಬೌಲರ್ ಗಳು 215 ರನ್ ಗಳಿಗೆ ಕಟ್ಟಿಹಾಕಿದರು.
ನುವಿಂದೂ ಫರ್ನಾಂಡೊ 50, ಕುಶಾಲ್ ಮೆಂಡೀಸ್ 34, ಡಿ.ವೆಲ್ಲಾಲ್ಗೆ 32,ಅವಿಷ್ಕಾ ಫರ್ನಾಂಡೊ 20, ಕರುಣ ರತ್ನೆ ಹಾಗೂ ರಜಿತಾ ತಲಾ 17ರನ್ ಗಳಿಸಿದರು.
ಭಾರತದ ಪರ ಶಮಿ ಹಾಗೂ ಕುಲ್ದೀಪ್ ತಲಾ 3, ಉಮ್ರಾನ್ ಮಲ್ಲಿಕ್ 2 ಹಾಗೂ ಅಕ್ಸರ್ ಪಟೇಲ್ ಒಂದು ವಿಕೆಟ್ ಪಡೆದರು.