ಲಂಕಾ ವಿರುದ್ಧ ಭಾರತಕ್ಕೆ ಸರಣಿ‌ ಗೆಲುವು, 2 ನೇ ಪಂದ್ಯದಲ್ಲಿ ಧವನ್ ಪಡೆಗೆ 3 ವಿಕೆಟ್ ಜಯ

ಕೊಲಂಬೊ,ಜು. 20- ಆಲ್ ರೌಂಡರ್ ದೀಪಕ್ ಚಹರ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಇಲ್ಲಿನ ಪ್ರೇಮದಾಸ ಕ್ತೇಡಾಂಗಣದಲ್ಲಿ ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮೂರು ವಿಕೆಟ್ ಗಳಿಂದ ಜಯಗಳಿಸಿತು.‌
ಈ ಮೂಲಕ 2-1 ರ ಅಂತರದಿಂದ ಧವನ್ ಪಡೆ ಸರಣಿ ಕೈ ವಶ ಮಾಡಿಕೊಂಡಿತು.
276 ರನ್ ಗಳ ಸವಾಲಿನ ಬೆನ್ನಹತ್ತಿದ ಭಾರತ ಇನ್ನೂ ಐದು ಎಸೆತಗಳು ಬಾಕಿಯಿರುವಂತೆ ಗೆಲುವಿನ ನಗೆ ಬೀರಿತು.
ಒಂದು ಹಂತದಲ್ಲಿ 193 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಭಾರತ ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಉಪನಾಯಕ ಭುವನೇಶ್ವರ್ ಹಾಗೂ ದೀಪಕ್ ಚಹರ್ ತಾಳ್ಮೆಯ ಆಟವಾಡುವುದರ ಜತೆಗೆ ಉತ್ತಮ‌ ಜತೆಯಾಟದಿಂದಾಗಿ‌ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಚಹರ್ 69 ಹಾಗೂ ಭುವನೇಶ್ವರ್ 19 ರನ್ ಗಳಿಸಿ ಅಜೇಯರಾಗುಳಿದರು.‌‌ ಸೂರ್ಯಕುಮಾರ್ 53 ರನ್ ಗಳಿಸಿದರೆ, ಮನೀಶ್ ಪಾಂಡೆ 37 ಹಾಗೂ ಕೃನಾಲ್ ಪಾಂಡ್ಯ 35 ರನ್ ಗಳಿಸಿದರು.
ಶ್ರೀಲಂಕಾ ಪರ ಹಸರಂಗ ಮೂರು‌ ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಗಳ ಸವಾಲಿನ ಮೊತ್ತ ದಾಲಿಸಿತು.
ಅವಿಷ್ಕಾ ಫರ್ನಾಂಡೊ 50 ಹಾಗೂ ಮಿನೊದ‌‌ ಭಾನುಕಾ 36 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರೂ ಆಟಗಾರರು 13.2 ಓವರ್ ಗಳಲ್ಲಿ 77 ರನ್ ಕಲೆಹಾಕಿತು. ಆದರೆ ಯಜುವೇಂದ್ರ ಚಹಲ್, ಭಾನೂಕ ಅವರ ವಿಕೆಟ್ ಪಡೆದು ಲಂಕಾ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಚರಿತ್ ಅಸಲೆಂಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 64 ರನ್ ಗಳಿಸಿದರು. ಚಮಿಕಾ‌ ಕರುಣ ರತ್ನೆ ಉಪಯುಕ್ತ 44 ರನ್ ಗಳಿಸಿದರು. ಧನಂಜಯ ಡಿಸಿಲ್ವ 32 ರನ್ ಗಳಿಸಿ ತಂಡದ ಮೊತ್ತವನ್ನು
270 ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ತದರ್ಶಿಸಲು ಸಾಧ್ಯವಾಗಲಿಲ್ಲ.
ಭಾರತ ಪರ ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಕಬಳಿಸಿದರೆ, ದೀಪಕ್ ಚಾಹರ್ 2 ವಿಕೆಟ್ ಪಡೆದರು. ಲಕ್ಷನ್ ಸಂದಕನ್ ಅವರನ್ನು ಇಶಾನ್‌ ಕಿಶನ್ ಅವರು ರನೌಟ್ ಮಾಡಿದರು.