ಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಶಿಖರ್ ಧವನ್‌ಗೆ ನಾಯಕಪಟ್ಟ


ಮುಂಬೈ, ಜೂ.೧೧-ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-೨೦ ಕ್ರಿಕೆಟ್ ಸರಣಿಗೆ ಭಾರತ ತಂಡ
ವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರ ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಉಪನಾಯಕನಾಗಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ದೇವದತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮುಂಬೈನಲ್ಲಿ ಇಂದು ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ ಸೇರಿ ನಾಯಕನ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿತು. ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು. ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್ ಅವರಿಗೆ ತಂಡದ ಸಾರಥ್ಯ ನೀಡಲು ತೀರ್ಮಾನಿಸಲಾಯಿತು.
ಐಸಿಸಿ ಚಾಂಪಿಯನ್‌ಶಿಪ್‌ನಲ್ಲಿ ಆಡಲು ವಿರಾಟ್ ಕೊಹ್ಲಿ ನೇತೃತ್ವದ ತಂಡ ಈಗಾಗಲೇ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಸಿಸಿಐ ಮತ್ತೊಂದು ತಂಡವನ್ನು ರಚಿಸಿ ಲಂಕಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದೆ.
ಈ ಪ್ರವಾಸಕ್ಕೆ ಕರ್ನಾಟಕದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಲಂಕಾ ಪ್ರವಾಸದ ತರಬೇತುದಾರರಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಪ್ರಸ್ತುತ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ.
ಜುಲೈ ೧೩ ರಿಂದ ಪ್ರವಾಸ ಆರಂಭ
ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಆತಿಥೇಯ ರಾಷ್ಟ್ರದ ವಿರುದ್ಧ ೩ ಏಕದಿನ ಮತ್ತು ೩ ಟಿ ೨೦ ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ಪಂದ್ಯಗಳು ಜುಲೈ ೧೩ ರಿಂದ ಪ್ರಾರಂಭವಾಗಲಿದ್ದು, ಟಿ ೨೦ ಸರಣಿ ಜುಲೈ ೨೧ ರಿಂದ ಪ್ರಾರಂಭವಾಗಲಿದೆ. ಏಕದಿನ ಪಂದ್ಯಗಳು ಜುಲೈ ೧೩, ೧೬ ಮತ್ತು ೧೮ ರಂದು ನಡೆಯಲಿದೆ. ಟಿ ೨೦ ಪಂದ್ಯಗಳು ಜುಲೈ ೨೧, ೨೩ ಮತ್ತು ೨೫ ರಂದು ನಡೆಯಲಿದೆ. ಕೊರೊನಾ ವೈರಸ್ ದೃಷ್ಟಿಯಿಂದ, ಎಲ್ಲಾ ಪಂದ್ಯಗಳನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ.
ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್.