ಲಂಕಾ ಅಧ್ಯಕ್ಷರಾಗಿ ರನಿಲ್ ಪ್ರಮಾಣವಚನ

ಕೊಲಂಬೊ,ಜು.೨೧- ಶ್ರಿಲಂಕಾದ ನೂತನ ಅಧ್ಯಕ್ಷರಾಗಿ ರನಿಲ್‌ವಿಕ್ರಮ ಸಿಂಘೆ ಇಂದು ಪ್ರಮಾಣವಚನ ಸ್ವೀಕರಿಸಿದರು. ನಿನ್ನೆಯಷ್ಟೇ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಕ್ರಮಸಿಂಘೆ ಜಯಗಳಿಸಿದರು.
ತೀವ್ರ ಆರ್ಥಿಕ ಸಂಕಷ್ಟದಿಂದ ಶ್ರೀಲಂಕಾ ತತ್ತರಿಸಿದ್ದು, ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳಿಗೆ ಬೆಚ್ಚಿಬಿದ್ದ ಗೊಟಬಯ ಸಿಂಗಾಪುರಕ್ಕೆ ಪಲಾಯನ ಮಾಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
೩೩೫ ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ರನಿಲ್‌ವಿಕ್ರಮ ಸಿಂಘೆ ೧೩೪ ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಡುಲ್ಲಾಸ್ ಅಲಹಪ್ಪರುಮಾ ಅವರು ೮೨ ಮತ ಪಡೆದಿದ್ದರು.
ಇದೇ ಮೊದಲ ಬಾರಿಗೆ ಶ್ರೀಲಂಕಾ ಇತಿಹಾಸದಲ್ಲಿ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ೭೩ ವರ್ಷದ ವಿಕ್ರಮಸಿಂಘೆ ೫ ದಶಕಗಳ ಆಡಳಿತದ ಅನುಭವ ಹೊಂದಿದ್ದು, ೬ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ದ್ವೀಪರಾಷ್ಟ್ರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿ ಆರ್ಥಿಕ ಪುನಶ್ಚೇತನ ನೀಡುವುದು ನೂತನ ಅಧ್ಯಕ್ಷರಿಗೆ ಸವಾಲಾಗಿ ಪರಿಣಮಿಸಿದೆ.