ರ್‍ಯಾಪಿಡ್ ರಸ್ತೆ ಬ್ರೇಕ್‌ಗೆ ಚಿಂತನೆ

ಬೆಂಗಳೂರು, ಜ.೧೩- ದೇಶದ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಿಲಿಕಾನ್ ಸಿಟಿ ನಗರದ ರ್‍ಯಾಪಿಡ್ ರಸ್ತೆ ಬಿರುಕು ಬಿಟ್ಟಿರುವ ಬಗ್ಗೆ ಅಸಮಾಧಾನ ಹೊರಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರ್‍ಯಾಪಿಡ್ ರಸ್ತೆ ನಿರ್ಮಾಣ ಕಾಮಗಾರಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಬೇರೆ ಮಾದರಿಯ ರಸ್ತೆಗಳಿಗಿಂತ ದುಬಾರಿಯಾದರೂ ಶೀಘ್ರ ನಿರ್ಮಾಣ ಮಾಡಬಹುದು ಹಾಗೂ ಬಹು ಕಾಲ ಬಾಳಿಕೆ ಬರಲಿದೆ ಎಂಬ ಕಾರಣಕ್ಕೆ ಪ್ರಾಯೋಗಿಕವಾಗಿ ನಗರದ ಹೊರ ವಲಯದಲ್ಲಿ ರ್‍ಯಾಪಿಡ್ ರಸ್ತೆ ನಿರ್ಮಿಸಲಾಗಿತ್ತು. ಆದರೆ, ರಸ್ತೆ ನಿರ್ಮಿಸಿ ಒಂದು ತಿಂಗಳು ಕಳೆಯುವುದರೊಳಗೆ ರ್‍ಯಾಪಿಡ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದೆ ಇದಕ್ಕೆ ಕಾರಣವಾಗಿದೆ.
ರ್‍ಯಾಪಿಡ್ ರಸ್ತೆ ಗುಣಮಟ್ಟ ಪರಿಶೀಲನೆ ಹೊಣೆಯನ್ನು ಐಐಎಸ್‌ಸಿ ವಹಿಸಲಾಗಿತ್ತು. ವರದಿ ಕೈ ಸೇರುವ ಮುನ್ನವೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಮುಖ್ಯಮಂತ್ರಿಗಳು ರಸ್ತೆ ನಿರ್ಮಾಣ ಮಾಡುವುದು ಬೇಡ ಎಂದು ಬಿಬಿಎಂಪಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ರ್‍ಯಾಪಿಡ್ ರಸ್ತೆ ನಿರ್ಮಾಣ ಬೇಡ ಎಂದು ತಜ್ಞರು ಸಲಹೆ ನೀಡಿದ್ದರು. ಇದನ್ನು ಲೆಕ್ಕಿಸದೆ ಬಿಬಿಎಂಪಿ ಅಧಿಕಾರಿಗಳು ಅದರಲ್ಲೂ ಪ್ರಧಾನ ಅಭಿಯಂತರೊರ್ವ ಹಠಕ್ಕೆ ಬಿದ್ದವರಂತೆ ರ್‍ಯಾಪಿಡ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ಆಯುಕ್ತರು ಹೇಳಿದ್ದೇನು?
ರ್‍ಯಾಪಿಡ್ ರಸ್ತೆ’ ವಿಮರ್ಶೆ ಮಾಡಿ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಮೂರು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆನಂತರ, ರ್‍ಯಾಪಿಡ್ ರಸ್ತೆ ನಿರ್ಮಾಣ ಕುರಿತು ತೀರ್ಮಾನ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವು ಭಾಗಗಳಲ್ಲಿ ಬಿರುಕು ಕಂಡಿರುವ ’ರ್‍ಯಾಪಿಡ್ ರಸ್ತೆ’ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಈ ಸಂಬಂಧ ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದವರು ಪರೀಕ್ಷೆ ನಡೆಸಲಿದ್ದಾರೆ ಎಂದರು.
ಬಿಬಿಎಂಪಿ ಹಳೇ ಮದ್ರಾಸ್ ರಸ್ತೆಯಲ್ಲಿ ೩೩೭.೫ ಮೀಟರ್ ರಸ್ತೆಯನ್ನು ’ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್ ತಂತ್ರಜ್ಞಾನದ ’ರ್‍ಯಾಪಿಡ್ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಿದೆ. ಈ ರಸ್ತೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಹೀಗಾಗಿ ಐಐಎಸ್‌ಸಿಯಿಂದ ವರದಿ ಪಡೆಯುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಇನ್ನೂ, ವರದಿ ಬಂದ ಬಳಿಕ ಯಾವ ಕಾರಣಕ್ಕೆ ರಸ್ತೆ ಬಿರುಕುಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಅದೇ ರೀತಿ, ಮರು ನಿರ್ಮಾಣದ ಖರ್ಚುಗಳನ್ನು ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಿರುಕು ಬಂದ ರಸ್ತೆ..!
ನಗರದ ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ಪ್ರಾಯೋಗಿಕವಾಗಿ ಈ ತಂತ್ರಜ್ಞಾನದಡಿ ನಿರ್ಮಿಸಿದ್ದ ೫೦೦ ಮೀಟರ್ ಉದ್ದದ ರ್‍ಯಾಪಿಡ್ ರಸ್ತೆಯನ್ನು ಡಿ.೮ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಉದ್ಘಾಟನೆಗೊಂಡು ತಿಂಗಳು ಕಳೆಯುವಷ್ಟರಲ್ಲೇ ಈ ರಸ್ತೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿತು.
ಇದರ ಬಗ್ಗೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ, ಕೋಟ್ಯಂತರ ರೂಪಾಯಿ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಅದು ಅಲ್ಲದೆ, ಆದಿತ್ಯ ಬಿರ್ಲಾ, ಅಲ್ಟ್ರಾ ಟೆಕ್ ಸಂಸ್ಥೆ ಸಹಯೋಗದೊಂದಿಗೆ ಬಿಬಿಎಂಪಿ, ರ್‍ಯಾಪಿಡ್ ರಸ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿತ್ತು. ಈ ತಂತ್ರಜ್ಞಾನದಡಿ ನಿರ್ಮಿಸಿದ್ದ ರಸ್ತೆಯು ದೀರ್ಘಕಾಲ ಬಾಳಿಕೆ ಬರಲಿದೆ ಎಂದು ಪಾಲಿಕೆ ಹೇಳಿಕೊಂಡಿತ್ತು. ರಸ್ತೆಗಳು ಡಾಂಬರೀಕರಣ, ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿ ವೆಚ್ಚಗಿಂತ ಶೇ.೨೫ ಹೆಚ್ಚಿದೆ. ಅಮೆರಿಕದಲ್ಲಿ ಇದೇ ಮಾದರಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅದೇ ಮಾದರಿ ರಸ್ತೆಗಳನ್ನು ನಗರದಲ್ಲಿ ನಿರ್ಮಾಣ ಮಾಡುವುದರಿಂದ ಹಲವು ಅನುಕೂಲಗಳಿವೆ ಎಂದು ಈ ಹಿಂದೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಲವು ಬಾರಿ ಉಲ್ಲೇಖಿಸಿದ್ದರು.