ರ್ಯಾಂಕ್ ಬಾಚಿಕೊಂಡ ಮುಕ್ತಾಂಬಿಕಾ ಕಾಲೇಜಿನ ಬಿಬಿಎ ಮತ್ತು ಬಿಸಿಎ ವಿದ್ಯಾರ್ಥಿಗಳು

ಕಲಬುರಗಿ:ನ.18: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯುತ್ತಿರುವ ಮುಕ್ತಾಂಬಿಕಾ ಮಹಿಳಾ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಆಗಸ್ಟ್-ಸೆಪ್ಟೆಂಬರ್ 2020 ರ ಅವಧಿಯಲ್ಲಿ ನಡೆಸಿದ ಕರ್ನಾಟಕ ರಾಜ್ಯ ಬಿಬಿಎ ಹಾಗೂ ಬಿಸಿಎ ಪರೀಕ್ಷೆಗಳಲ್ಲಿ ಪ್ರಥಮ ರ್ಯಾಂಕ್ ಹಾಗೂ ಇತರೆ ಉನ್ನತ ಶ್ರೇಣಿಗಳನ್ನು ಪಡೆದು ಕಾಲೇಜು ಹಾಗೂ ಸಂಘಕ್ಕೆ ಕೀರ್ತಿ ತಂದಿದ್ದಾರೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪ್ರಕಟಿಸಿದ ಫಲಿತಾಂಶದ ಪ್ರಕಾರ, ಅಂತಿಮ ವರ್ಷದ ಪರೀಕ್ಷೆಯಲ್ಲಿ ಬಿಬಿಎ ವಿದ್ಯಾರ್ಥಿನಿ ನಿಶ್ಶಬ್ದ ಜಿ.ಕೆ. ಶೇಕಡಾ 91.59 ಅಂಕಗಳನ್ನು ಗಳಿಸಿ ಪ್ರಥಮ ರ್ಯಾಂಕ್ ಪಡೆದರೆ, ಬಿಸಿಎ ವಿದ್ಯಾರ್ಥಿನಿ ರೀತು ಎಸ್.ಭೈರಾಮಡಗಿ ಶೇಕಡಾ 87.08 ಅಂಕಗಳನ್ನು ಗಳಿಸಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಅದೇ ರೀತಿ ಮುಕ್ತಾಂಬಿಕಾ ಕಾಲೇಜಿನ ವಿದ್ಯಾರ್ಥಿಗಳು ಬಿಬಿಎ ಮತ್ತು ಬಿಸಿಎ ಎರಡರಲ್ಲೂ ಇತರೆ ರ್ಯಾಂಕ್‍ಗಳನ್ನು ಪಡೆದುಕೊಂಡಿದ್ದಾರೆ. ಶಿವಾನಿ.ಎಸ್ ಶೇ.86.68 ಅಂಕ ಗಳಿಸಿ 9ನೇ ರ್ಯಾಂಕ್ ಪಡೆದರೆ, ಅದೇ ಕಾಲೇಜಿನ ಮೇಘನಾ ಬಿಸಿಎ ಪರೀಕ್ಷೆಯಲ್ಲಿ ಶೇ.81.66 ಗಳಿಸುವ ಮೂಲಕ 4ನೇ ರ್ಯಾಂಕ್ ಪಡೆದಿದ್ದಾರೆ. ಬಿಸಿಎ ಪರೀಕ್ಷೆಯಲ್ಲಿ ರಶ್ಮಿ ಮೊಗರೆ ಶೇ.79.97 ಅಂಕ ಗಳಿಸಿ 5ನೇ ರ್ಯಾಂಕ್ ಪಡೆದರೆ, ಸಾವಿತ್ರಿ ಶೇ.79.89 ಅಂಕ ಪಡೆದು 6ನೇ ರ್ಯಾಂಕ್ ಪಡೆದಿದ್ದಾರೆ ಹಾಗೂ ಶಿವಾನಿ ಶೇ.79.86 ಅಂಕ ಪಡೆದು 7ನೇ ರ್ಯಾಂಕ್ ಗಳಿಸಿ, ಸಿಮ್ರನ್ ಶೇ.79.69 ರಷ್ಟು ಅಂಕಗಳನ್ನು ಗಳಿಸಿ 8ನೇ ರ್ಯಾಂಕ್ ಪಡೆದರೆ ಹಾಗೂ ಅಶ್ವಿನಿ ಶೇ.77.81 ಅಂಕ ಪಡೆದು 10ನೇ ರ್ಯಾಂಕ್ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ನಡೆಸಿದ ಬಿಬಿಎ ಮತ್ತು ಬಿಸಿಎ ಎರಡೂ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಗಳಿಸುವ ಮೂಲಕ ಸಂಸ್ಥೆಗಳಿಗೆ ಮತ್ತು ಸಂಘಕ್ಕೆ ಪ್ರಶಸ್ತಿಗಳನ್ನು ತಂದಿದ್ದಕ್ಕಾಗಿ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ, ಸಂಘದ ಚೇರಪರ್ಸನರಾದ ಮಾತೋಶ್ರೀ ಡಾ.ದಾಕ್ಷಾಯಣಿ ಅವ್ವಾಜಿ ಹಾಗೂ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಬೋಧಕ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಿಲ್ಪಾ ಕಂದಗೂಳ ಅವರು ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.