ರೌಡಿ, ದುಷ್ಕರ್ಮಿಗಳಿಗೆ ಶಾಕ್

ಬೆಂಗಳೂರು, ಜು. ೧೦- ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ರೌಡಿಗಳಿಗೆ ಶಾಕ್ ನೀಡಿದ್ದಾರೆ. ಇಂದು ನಸುಕಿನಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದರೆ, ಮತ್ತೊಂದೆಡೆ ನಗರದಲ್ಲಿರುವ ಒಂದು ಸಾವಿರಕ್ಕೂ ಹೆಚ್ಚುಮಂದಿ ರೌಡಿಗಳ ಮನೆಮೇಲೆ ಪೊಲೀಸರು ದಾಳಿ ನಡೆಸಿ ಬಾಲಬಿಚ್ಚಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಮೊಬೈಲ್‌ಗಳ ಮೂಲಕ ಸಂಪರ್ಕ ಸಾಧಿಸಿ, ಅಪರಾಧ ಕೃತ್ಯಗಳ ನಡೆಸಲು ಸಂಚು ರೂಪಿಸುತ್ತಿದ್ದ ಮಾಹಿತಿ ಆಧರಿಸಿ ಪೊಲೀಸರು ದಿಢೀರ್ ದಾಳಿ ನಡೆಸಿದಾಗ ೩೦ ಮಂದಿ ಕೈದಿಗಳ ಬಳಿ ಮೊಬೈಲ್‌ಗಳು, ಸಿಮ್ ಕಾರ್ಡ್, ಗಾಂಜಾ, ಚಾಕು, ಕತ್ತಿ, ಮತ್ತಿತರ ವಸ್ತುಗಳು ದೊರೆತಿವೆ.
ಇತ್ತೀಚೆಗೆ ಹಾಡಹಗಲೇ ದಾಳಿ ನಡೆಸಿ ಹತ್ಯೆ ಮಾಡಿದ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ ರೌಡಿಗಳ ಮನೆಮೇಲೆ ದಾಳಿ ನಡೆಸಿ ಬಿಸಿಮುಟ್ಟಿಸಲಾಗಿದೆ.
ಸಿಸಿಬಿಯ ವಿಶೇಷ ತಂಡಗಳು, ಮುಂಜಾನೆಯಿಂದ ಜೈಲಿನೊಳಗೆ ದಾಳಿ ಮಾಡಿ ಎಲ್ಲ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದ್ದು ಸುಮಾರು ೩೦ ಮಂದಿ ಕೈದಿಗಳ ಬಳಿ ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು, ಗಾಂಜಾ, ಚಾಕು ಸೇರಿದಂತೆ, ಹಲವು ವಸ್ತುಗಳು ದೊರೆತಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊರಗಿನಿಂದ ಮಾದಕ ವಸ್ತು ಜೈಲಿನೊಳಗೆ ಪೂರೈಕೆ ಆಗುತ್ತಿರುವುದು ಗೊತ್ತಾಗಿದ್ದು, ಈ ಸಂಬಂಧ ಜೈಲು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಜೈಲಿನ ಮೇಲೆ ಮುಂಜಾನೆ ದಿಢೀರ್ ದಾಳಿಮಾಡಿ ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ರೌಡಿಗಳಿಗೆ ಶಾಕ್ :
ಈ ನಡುವೆ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್, ಫೈನಾನ್ಸಿಯರ್ ಮದನ್‌ನನ್ನು ಹಾಡುಹಗಲೇ ಕೊಲೆಗೈದ ಹಿನ್ನೆಲೆಯಲ್ಲಿ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ರೌಡಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಅವುಗಳನ್ನು ಹತ್ತಿಕ್ಕಲು ನಗರದ ವಿವಿಧ ವಿಭಾಗಗಳಲ್ಲಿ ಪೊಲೀಸರು ಮುಂಜಾನೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ಕೇಂದ್ರ, ಪಶ್ಚಿಮ, ಉತ್ತರ, ಈಶಾನ್ಯ, ವೈಟ್ ಫೀಲ್ಡ್, ಪೂರ್ವ ಇತರ ವಿಭಾಗದಲ್ಲಿ ಪೊಲೀಸರು, ರೌಡಿಗಳು, ಹಳೆ ಕುಖ್ಯಾತ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಸೋನೆ ಮಳೆ ಚಳಿಯಲ್ಲೂ ಬಿಸಿ ಮುಟ್ಟಿಸಿ ಪರಿಶೀಲನೆ ನಡೆಸಿದ್ದಾರೆ.
ರೌಡಿಗಳಿಗೆ ಎಚ್ಚರಿಕೆ:
ನಗರದ ವಿವಿಧ ವಿಭಾಗಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ನಗರದ ಎಲ್ಲಾ ವಿಭಾಗಗಳ ಪೊಲೀಸರಿಂದ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿರುವುದು ವಿಶೇಷವಾಗಿದೆ.
ಕೇಂದ್ರ ವಿಭಾಗದಲ್ಲಿ ಸುಮಾರು ೧೦೦ ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳು, ಮೊಬೈಲ್, ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ರೌಡಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಅವರ ವಿಳಾಸ, ಮೊಬೈಲ್ ಸಂಖ್ಯೆ, ಉದ್ಯೋಗ, ಕುಟುಂಬದ ವಿವರಗಳನ್ನು ಕಲೆಹಾಕಿ ಮುಂದೆ ರೌಡಿ ಚಟುವಟಿಕೆಗಳಲ್ಲಿ ತೊಡಗುವುದಾಗಲಿ, ಅಪರಾಧ ಕೃತ್ಯ ನಡೆಸುವುದು, ಬೇರೆಯವರಿಗೆ ನೆರವು ನೀಡುವುದಾಗಲಿ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.
ಈಶಾನ್ಯದಲ್ಲಿ ದಾಳಿ:
ಪಶ್ಚಿಮ ವಿಭಾಗದ ೨೫೦ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, ಉತ್ತರ ವಿಭಾಗದಲ್ಲಿ ೨೯೨ ರೌಡಿ ಹಾಗೂ ಸಹಚರರ ಮನೆ ಮೇಲೆ ದಾಳಿ ನಡೆಸಿ, ೧೫೨ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಈಶಾನ್ಯ ವಿಭಾಗದಲ್ಲೂ ಪೊಲೀಸರ ದಾಳಿ ಮುಂದುವರೆದಿದ್ದು, ಮುಬಾರಕ್, ಸಿಕಂದರ್, ಅಜಯ್ ಸೇರಿದಂತೆ, ಹಲವು ರೌಡಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಯಲಹಂಕ, ಕೊತ್ತನೂರು, ವಿದ್ಯಾರಣ್ಯಪುರ ಸೇರಿದಂತೆ, ಹಲವು ಕಡೆ ದಾಳಿ ಮಾಡಿ, ಪಾಯಿಸನ್ ರಾಮ, ಛತ್ರಿ ಹೇಮಂತ, ಕೆಂಡಾ ವಿಷ್ಣು, ಕೊಳಿ ಜಗ್ಗ, ಮಂಡ್ಯ ರಕ್ಷಿತಾ ಮನೆಗಳನ್ನು ಪರಿಶೀಲಿಸಿದ್ದಾರೆ.
ಮಾರಕಾಸ್ತ್ರ ಜಪ್ತಿ:
ಡಿ.ಜೆ.ಹಳ್ಳಿ, ಬಾಗೂರ್ ಲೇಔಟ್, ಕೆ.ಜಿ ಹಳ್ಳಿ, ಇಸ್ಲಾಂಪುರಂ ಸೇರಿದಂತೆ, ಅನೇಕ ಕಡೆ ಪೊಲೀಸರು ದಾಳಿ ನಡೆಸಿದ್ದು, ಆಗ್ನೇಯ ವಿಭಾಗದ ಪೊಲೀಸರಿಂದ ಸುಮಾರು ೨೦೦ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.
ಬೇಗೂರಿನ ಜೆಸಿಬಿ ನಾರಾಯಣ, ಬಬ್ಲಿ, ಕುಮಾರ, ಸೋಲೊಮನ್, ಮಜೀದ್, ಕಬೂತರ್, ಇಮ್ರಾನ್, ಚೌದ್ರಿ ಸೇರಿದಂತೆ, ವಿವಿಧ ರೌಡಿಗಳಿಗೆ ಪೊಲೀಸರು ಬಿಸಿ ತಾಕಿಸಿದ್ದಾರೆ. ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ, ವಿವೇಕನಗರ, ವೈಯಾಲಿಕಾವಲ್ ಸೇರಿದಂತೆ, ವಿವಿಧ ವಿಭಾಗದಲ್ಲಿ ದಾಳಿ ಮಾಡಿದ ಪೊಲೀಸರು, ಕೆಲರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೂರ್ವ ವಿಭಾಗದಲ್ಲಿ ವಶಕ್ಕೆ ಪಡೆದ ರೌಡಿಗಳಿಗೆ ಫ್ರೇಜರ್ ಟೌನ್‌ನ ಸಂತೋಷ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ.
ಲಗ್ಗೆರೆ ಸೀನನಿಗೆ ಡ್ರಿಲ್:
ರೌಡಿ ಲಗ್ಗೆರೆ ಸೀನಾ, ಬಾಂಬ್ ನಾಗನ ಪುತ್ರ ಶಾಸ್ತ್ರಿ, ಸೈಲೆಂಟ್ ಸುನೀಲ, ಸೈಕಲ್ ರವಿ, ರಮೇಶ್ ಅಲಿಯಾಸ್ ಕುಳ್ಳಿ, ಆನಂದ, ಜಫ್ರು, ಯಶವಂತ, ಜಿಮ್ ವಿನಯ್, ರಘುನಂದನ ಅಲಿಯಾಸ್ ರಘು, ಅರುಣ್, ಶ್ರೀಕಾಂತ, ಆನಂದ ಅಲಿಯಾಸ್ ಮೆಡ್ಡ, ಪ್ರವೀಣ ಸೇರಿದಂತೆ ಅನೇಕ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಕಾಗದಪತ್ರ, ಚೆಕ್ ಬುಕ್, ಮಾರಕಾಸ್ತ್ರ, ಮಾದಕವಸ್ತುಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಮಾದಕ ವಸ್ತುಪತ್ತೆ:
ವೈಟ್‌ಫೀಲ್ಡ್ ವಿಭಾಗದಲ್ಲಿ ೧೦೨ ಕಡೆ ಪರಿಶೀಲನೆ ನಡೆಸಿ, ೮೨ ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕುಖ್ಯಾತ ರೌಡಿಶೀಟರ್‌ಗಳಾದ ಕಾಡುಬೀಸನಹಳ್ಳಿ ಜಗ್ಗ, ಸೋಮ, ರೋಹಿತ್ ಗೌಡನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಗಾಂಜಾ, ಮಾದಕ ವಸ್ತುಗಳು ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ. ಯಲಹಂಕ ಪೊಲೀಸರ ದಾಳಿ ವೇಳೆ ಗಾಂಜಾ ಸಿಕ್ಕಿದ್ದು, ಲಾಲ ಎಂಬಾತನ ಮನೆಯಲ್ಲಿ ಐದು ಕೆಜಿ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ರೌಡಿಗಳ ಪೆರೇಡ್ :
ಉತ್ತರ ವಿಭಾಗದಲ್ಲಿ ೨೩೦ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಅವರನ್ನು ಮಲ್ಲೇಶ್ವರಂ ಆಟದ ಮೈದಾನಕ್ಕೆ ಕರೆತಂದು ಪರೇಡ್ ನಡೆಸಲಾಗಿದೆ.
ಪಶ್ಚಿಮ ವಿಭಾಗದಲ್ಲಿ ಮುಂಜಾನೆಯಿಂದಲೇ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು ಚಳಿಯಲ್ಲೂ ಬಿಸಿ ಮುಟ್ಟಿಸಿ ಖಾಯಂ ವಿಳಾಸ, ಮೊಬೈಲ್ ಸಂಖ್ಯೆ, ಉದ್ಯೋಗ, ಕುಟುಂಬದ ವಿವರಗಳನ್ನು ಕಲೆಹಾಕಲಾಗಿದೆ.
ದಾಳಿ ನಡೆಸಿದ ರೌಡಿಗಳಿಗೆ ಇನ್ನು ಮುಂದೆ ಚಟುವಟಿಕೆಗಳಲ್ಲಿ ತೊಡಗುವುದಾಗಲಿ, ಅಪರಾಧ ಕೃತ್ಯ ನಡೆಸುವುದು, ಬೇರೆಯವರಿಗೆ ನೆರವು ನೀಡುವುದಾಗಲಿ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.
ಮೂರು ತಂಡಗಳಿಂದ ಪಶ್ಚಿಮ ವಿಭಾಗದಲ್ಲಿ ದಾಳಿ ನಡೆಸಿ ಅಪರಾಧ ಚಟುವಟಿಕೆಗೆ ಬಳಸುವ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.


ಕಟ್ಟುನಿಟ್ಟಿನ ಸೂಚನೆ:
ಕೊರೊನಾ ಲಾಕ್‌ಡೌನ್ ತೆರವುಗೊಂಡ ಬಳಿಕ ರೌಡಿ ಚಟುವಟಿಕೆಗಳು ಹೆಚ್ಚಾಗಿದ್ದು ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಹತ್ತು ಹಲವು ಕಾರಣಗಳಿಂದ ಕೊಲೆ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಜೈಲಿನಿಂದಲೇ ಕುಳಿತು ರೌಡಿ ಚಟುವಟಿಕೆ ನಿಯಂತ್ರಣದ ಬಗ್ಗೆಯೂ ತನಿಖೆ ವೇಳೆ ಬಯಲಾಗಿದ್ದರಿಂದ ಹೆಚ್ಚುವರಿ ಆಯುಕ್ತರು ಡಿಸಿಪಿಗಳೊಂದಿಗೆ ಸಭೆ ನಡೆಸಿ ದಾಳಿ ನಡೆಸಲು ಸೂಚನೆ ನೀಡಲಾಗಿತ್ತು ಎಂದರು.
ಅದರಂತೆ ಹಲವು ದಿನಗಳಿಂದ ಆಯಾ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಲಬಿಚ್ಚದಂತೆ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಡಿಸಿಪಿಗಳಾದ ಅನುಚೇತ್,ಶರಣಪ್ಪ,ಸಂಜೀವ್ ಪಾಟೀಲ್, ಬಾಬಾ,ಧರ್ಮೇಂದ್ರ ಕುಮಾರ್ ಮೀನಾ,ಶ್ರೀ ನಾಥ್ ಜೋಶಿ,ದೇವರಾಜ್ ಅವರಿದ್ದರು.

ರೌಡಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದನ್ನು ಹತ್ತಿಕ್ಕಲು ರೌಡಿಗಳ ಮೇಲೆ ದಾಳಿ ನಡೆಸಲಾಗಿದೆ. ಜೈಲಿನಿಂದ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಮಾಹಿತಿಯಿಂದ ದಾಳಿ ನಡೆಸಿ ಮಾಹಿತಿ ಕಲೆಹಾಕಲಾಗಿದೆ.

ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ.