ರೌಡಿಸಂನಲ್ಲಿ ಹೆಸರು ಮಾಡಲು ಹೋಗಿ ಅಮಾಯಕ ಬಸ್ ಚಾಲಕನ ಕೊಲೆ

ಕಲಬುರಗಿ,ಮೇ.19-ಇದೇ ತಿಂಗಳ 11 ರಂದು ನಗರದ ಜನನಿಬಿಡ ಪ್ರದೇಶವಾದ ಸೂಪರ್ ಮಾರ್ಕೆಟ್‍ನ ಸಿಟಿ ಬಸ್ ನಿಲ್ದಾಣದ ಬಳಿ ಹಾಡು ಹಗಲೇ ನಡೆದ ಬಸ್ ಚಾಲಕನ ಕೊಲೆ ಪ್ರಕರಣವನ್ನು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬ್ರಹ್ಮಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟ ವಿಷಯ ಕೇಳಿ ಸ್ವತ: ಪೊಲೀಸರೇ ದಂಗಾಗಿ ಹೋಗಿದ್ದಾರೆ. ತಮನ್ನು ನೋಡಿ ಜನ ಭಯ ಭೀತರಾಗಬೇಕು, ರೌಡಿಸಂನಲ್ಲಿ ಹೆಸರು ಮಾಡಬೇಕು, ರೌಡಿಗಳು ಎಂದು ಜನ ಗುರುತಿಸಬೇಕು ಎಂಬ ಅತ್ಯಂತ ಕೆಟ್ಟ ಉದ್ದೇಶದಿಂದ ಅಮಾಯಕ ಬಸ್ ಚಾಲಕನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂಬ ಆಘಾತಕಾರಿ ವಿಷಯ ಬಯಲಿಗೆ ಬಂದಿದೆ.
ಇದಷ್ಟೇ ಅಲ್ಲದೆ ಕೊಲೆ ಮಾಡಿದ ನಂತರ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಕೊಲೆ ಮಾಡಿದ ವಿಷಯವನ್ನು ಹಂಚಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಕೊಲೆ ಮಾಡುವ ಮುನ್ನ ಆರೋಪಿಗಳು ವಿಪರೀತ ಮದ್ಯ ಸೇವನೆ ಮಾಡಿದ್ದರು. ಆಜಾದಪುರದ ಕುರಿಗಾಹಿ ದಿನೇಶ ಎಂಬಾತನ ಜೊತೆ ಕಿರಿಕಿರಿ ಮಾಡಿಕೊಂಡಿದ್ದರು. ಆತನ ಕೊಲೆ ಮಾಡಲೆಂದು ನಗರದ ಸಿಟಿ ಬಸ್ ನಿಲ್ದಾಣದ ಬಳಿ ಮೇ.10 ಮತ್ತು 11 ರಂದು ಹೊಂಚು ಹಾಕಿ ಕಾಯುತ್ತ ಕುಳಿತಿದ್ದರು. ಆತ ಬಾರದೇ ಇದ್ದಾಗ ಬಸ್ ಚಾಲಕ ನಾಗಯ್ಯ ಮಠಪತಿ ಅವರನ್ನು ಕಂಡಕ್ಟರ್ ಎಂದು ತಪ್ಪಾಗಿ ತಿಳಿದು ಆತನ ಬಳಿ ಹಣ ಇರಬಹುದೆಂದು ತಿಳಿದು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ಬಂಧನ
ಮೇ.11 ರಂದು ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಚಾಲಕ ನಾಗಯ್ಯ ಮಠಪತಿ ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಹಾಡುಹಗಲೇ ನಡೆದ ಈ ಕೊಲೆ ಪ್ರಕರಣದಿಂದಾಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಜನ ಭಯ ಭೀತರಾಗಿದ್ದರು. ವಿಷಯ ತಿಳಿದು ಬ್ರಹ್ಮಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಚಂದ್ರಪ್ಪಾ, ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ ವಿ.ಎಸ್.ಅವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಚೀನ್ ಎಸ್.ಚಲವಾದಿ ಅವರ ನೇತೃತ್ವದಲ್ಲಿ ಪಿಎಸ್‍ಐ ಅಶೋಕ ನಿಡೋದೆ, ಎ.ಎಸ್.ಐ ಮಹೆಬೂಬಸಾಬ್, ಸಿಬ್ಬಂದಿಗಳಾದ ಶಿವಪ್ರಕಾಶ, ಕೇಶುರಾಯ, ರಾಮು ಪವಾರ, ಸಂತೋಷ, ನವೀನಕುಮಾರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ತನಿಖೆ ನಡೆಸಿ ಕಲಬುರಗಿ ತಾಲ್ಲೂಕಿನ ತೊಂಡಕಲ್ ಗ್ರಾಮದ, ಹಾಲವಸ್ತಿ ನಿಪ್ಪಾಣಿಯ ಭೀಮಾಶಂಕರ ಅಲಿಯಾಸ್ ಜೈಭೀಮ ತಂದೆ ಶರಣಪ್ಪ ಕಟ್ಟಿಮನಿ (23) ಮತ್ತು ಜೋಗೂರ ಗ್ರಾಮದ ಬಸವರಾಜ ತಂದೆ ರಮೇಶ ಪರಪ್ಪಗೋಳ (20) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.