ರೌಡಿಶೀಟರ್‌ ನೀಲು ಹತ್ಯೆ: ಮೂವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಎ.೧- ರೌಡಿ ಶೀಟರ್ ಕೋಟೆಕಾರಿನ ನೀಲು ಯಾನೆ ನೀಲಯ್ಯ ಪೂಜಾರಿ(33) ಕೊಲೆ ಪ್ರಕರಣದ ಮೂವರು ಸಾಬೀತಾದ ಹಿನ್ನೆಲೆಯಲ್ಲಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಅವರು ಜೀವಾವಧಿ ಶಿಕ್ಷೆ ಹಾಗೂ 70,000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕೋಟೆಕಾರು ನಿವಾಸಿ ಸಂತೋಷ್ ರೈ, ಸುಧಾಕಾರ್ ಯಾನೆ ಚಿದಾನಂದ ಮತ್ತು ತಲಪಾಡಿ ಕೃಷ್ಣ ಪ್ರಸಾದ್ ರೈ ಶಿಕ್ಷೆಗೆ ಒಳಗಾದವರು. ಒಳಸಂಚು ರೂಪಿಸಿದ ಆರೋಪ ಹೊಂದಿದ್ದ ಕೊಟೇಕಾರಿನ ಜಗದೀಶ್ ಮತ್ತು ಕಿಶನ್ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಂಡಿದ್ದಾರೆ. ಕೊಲೆ ಕೃತ್ಯಕ್ಕೆ ಜೀವಾವಧಿ ಶಿಕ್ಷೆ 50 ಸಾವಿರ ರೂ. ದಂಡ , ಒಳ ಸಂಚು ರೂಪಿಸಿದ್ದಕ್ಕೆ 7 ವರ್ಷ ಶಿಕ್ಷೆ , ಹಾಗೂ 20 ಸಾವಿರ ದಂಡ, ತಡೆದು ನಿಲ್ಲಿಸಿರುವುದಕ್ಕೆ 1 ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ನೀಲಯ್ಯ ಪೂಜಾರಿ ಕ್ರಿಮಿನಲ್ ಹಿನ್ನಲೆ ಹೊಂದಿದ್ದ ವ್ಯಕ್ತಿಯಾಗಿದ್ದ. ಐವರ ತಂಡ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದಂತೆ 2013 ಸೆ.4 ರ ರಾತ್ರಿ ಮಡ್ಯಾರು ಜಂಕ್ಷನ್ ನಲ್ಲಿ ಕಾರು ತಡೆದು ನಿಲ್ಲಿಸಿ ೩೮ ಬಾರಿ ಇರಿದು ಕೊಲೆ ಮಾಡಿದ್ದರು. ಸರಕಾರದ ಪರ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದಿಸಿದ್ದರು.