ರೌಡಿಗಳಿಗೆ ಸಿಸಿಬಿ ಶಾಕ್

ಮಾರಕಾಸ್ತ್ರ ವಶ
ಬೆಂಗಳೂರು,ನ.೨೩-ಅಪರಾಧ ಕೃತ್ಯಗಳನ್ನು ಹತ್ತಿಕ್ಕಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ರೌಡಿಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಗರದಲ್ಲಿ ೮೬ ರೌಡಿಗಳಿಗೆ ಶಾಕ್ ನೀಡಿದ್ದಾರೆ.
ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ೮೬ ರೌಡಿಗಳ ಮನೆಗಳ ಮೇಲೆ ನಿನ್ನೆ ಮಧ್ಯರಾತ್ರಿಯಿಂದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.ನಗರದ ವಿಭಾಗಗಳ ಠಾಣಾ ವ್ಯಾಪ್ತಿಗಳಲ್ಲಿ ಐವರು ಎಸಿಪಿ, ೨೦ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಗರದ ಪ್ರಮುಖ ರೌಡಿಗಳ ಮನೆಗಳ ಮೇಲೆ ರೇಡ್ ನಡೆಸಿ ಪರಿಶೀಲನೆ ನಡೆಸಲಾಗಿದೆ.ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗನ ಮನೆ ಮೇಲೂ ದಾಳಿ ನಡೆಸಿದ್ದು ಸಿಸಿಬಿ ದಾಳಿ ವೇಳೆ ಇಬ್ಬರು ರೌಡಿಗಳು ಮನೆಗಳಲ್ಲಿ ಇರಲಿಲ್ಲ.ದಾಳಿ ವೇಳೆ ಕುಖ್ಯಾತ ರೌಡಿಗಳಾದ ಕೋತಿರಾಮ, ಆರ್.ಟಿ.ನಗರದ ವೆಂಕಟೇಶ್ ಸೇರಿ ೨೬ ಮಂದಿ ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಉತ್ತಮ ಜೀವನ ನಡೆಸಬೇಕು ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.ಕೆಲವು ರೌಡಿಶೀಟರ್‌ಗಳು ಬಿಬಿಎಂಪಿ ಚುನಾವಣೆ ತಯಾರಿಯಲ್ಲಿದ್ದು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದರು. ವಾರೆಂಟ್ ಇದ್ದ ಕೆಲವರು ಕೋರ್ಟ್‌ಗೆ ಹಾಜರಾಗುತ್ತಿರಲಿಲ್ಲ.
ಇನ್ನೂ ಕೆಲವರು ಬಿಬಿಎಂಪಿ ಚುನಾವಣೆ ತಯಾರಿಯಲ್ಲಿದ್ದರೆ.ಮತ್ತೆ ಕೆಲವರು ತಮ್ಮ ಮನೆಯವರನ್ನು ಚುನಾವಣೆಗೆ ನಿಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಕೆಲವರು ಚುನಾವಣೆಗಾಗಿ ಹಣಕಾಸು ವಸೂಲಿ ಮಾಡುತ್ತಿದ್ದಾರೆ. ಬಿಬಿಎಂಪಿ ಚುನಾವಣೆ ಹಾಗೂ ಸಮಾಜದ ಸ್ವಾಸ್ಥ್ಯ ಸಲುವಾಗಿ ದಾಳಿ ನಡೆಸಲಾಗಿದೆ ಎಂದರು.ದಾಳಿ ವೇಳೆ ಕೆಲವರು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ವಶಕ್ಕೆ ಪಡೆದಿರುವ ೨೬ ರೌಡಿಗಳ ವಿಚಾರಣೆ ನಡೆಸಲಾಗುತ್ತಿದೆ ರೌಡಿಗಳ ಆದಾಯ ಮತ್ತು ಅವರು ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೆಲ ರೌಡಿಗಳ ಮನೆಯಲ್ಲಿ ದಾಳಿ ವೇಳೆ ಮಾರಾಕಾಸ್ತ್ರಗಳು ಪತ್ತೆ ಆಗಿವೆ ಎಂದು ಶರಣಪ್ಪ ಮಾಹಿತಿ ನೀಡಿದರು.
ಮಾರಕಾಸ್ತ್ರಗಳು ಪತ್ತೆ:
ಸಿಸಿಬಿ ದಾಳಿ ವೇಳೆ ರೌಡಿಶೀಟರ್ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ರಿಜ್ವಾನ್ ಶಿಷ್ಯ ಸ್ಟಾರ್ ನವೀನ್ ಮನೆಯಲ್ಲಿ ಡ್ಯಾಗರ್ ಪತ್ತೆಯಾಗಿದ್ದು ಸಿಸಿಬಿ ದಾಳಿ ವೇಳೆ ಸ್ಟಾರ್ ನವೀನ್ ಪರಾರಿಯಾಗಿದ್ದಾನೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲೂ ಸಿಸಿಬಿ ದಾಳಿ ನಡೆದಿ ಪರಿಶೀಲನೆ ನಡೆಸಿದೆ. ಈ ವೇಳೆ ವಿಜಯನಗರ ರೌಡಿಶೀಟರ್ ರಾಘವೇಂದ್ರ ಮನೆಯಲ್ಲಿ ಎರಡು ಲಾಂಗ್‌ಗಳು ಪತ್ತೆಯಾಗಿವೆ.