ರೌಡಿಗಳಿಗೆ ಚಳಿ ಬಿಡಿಸಿದ ಖಾಕಿ

West divison-- Rowday Parade

ಬೆಂಗಳೂರು, ನ. ೭- ಕೊಲೆಯತ್ನ, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ೧೮೦ಕ್ಕೂ ರೌಡಿಗಳ ಮನೆಗಳ ಮೇಲೆ ಪಶ್ಚಿಮ ವಿಭಾಗದ ಪೊಲೀಸರು ಇಂದು ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.
ಪಶ್ಚಿಮ ವಿಭಾಗದ ವ್ಯಾಪ್ತಿಯ ಮಾಗಡಿ ರೋಡ್, ಕೆಪಿ ಅಗ್ರಹಾರ, ಬ್ಯಾಟರಾಯನ ಪುರ, ಕಾಟನ್ ಪೇಟೆ, ಜೆಜೆ ನಗರ, ಚಾಮರಾಜಪೇಟೆ, ಕೆಂಗೇರಿ, ವಿಜಯನಗರದ ರೌಡಿಗಳ ಮೇಲೆ ಹಾಗೂ ಗಾಂಜಾ ಪೆಡ್ಲರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಬಿಸಿ ಮುಟ್ಟಿಸಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಎಸಿಪಿ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಒಳಗೊಂಡ ಸಿಬ್ಬಂದಿಯು ಜೊತೆ ದಾಳಿ ನಡೆಸಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಾಗಲಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದಾಗಲಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪೆಡ್ಲರ್‌ಗಳು, ಜೊತೆಗೆ ನ್ಯಾಯಾಲಯದಿಂದ ಸಮನ್ಸ್ ಇದ್ದರೂ ಕೂಡ ಹಾಜರಾಗದೇ ತಲೆ ಮರೆಸಿಕೊಂಡ ಆರೋಪಿಗಳು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದಂತಹ ರೌಡಿಶೀಟರ್‌ಗಳನ್ನು ಕರೆತಂದು ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಒಟ್ಟು ೧೮೦ ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದ್ದು, ೧೨೩ ಮಂದಿ ರೌಡಿಗಳು ಮತ್ತು ಡ್ರಗ್ ಪೆಡ್ಲರ್‌ಗಳನ್ನು ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದೆ. ಇನ್ನೂ ೬೦೦ ಮಂದಿ ಪೊಲೀಸರಿಂದ ಈ ಕಾರ್ಯಚರಣೆ ನಡೆಸಲಾಗಿದೆ.
ರೌಡಿಗಳಿಗೆ ಎಚ್ಚರಿಕೆ ನೀಡಿ ಮಾತನಾಡಿದ ಡಿಸಿಪಿ ಸಂಜೀವ್ ಪಾಟೀಲ್ ಅವರು ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೇ ಪರಿಸ್ಥಿತಿ ನೆಟ್ಟಗಿರಲ್ಲ ಹುಷಾರ್, ಯಾವುದೇ ಕಾರಣಕ್ಕೂ ಬಾಲ ಬಿಚ್ಚದಿರಿ. ಸಣ್ಣ ದೂರು ಬಂದರೂ ಮೊಕದ್ದಮೆ ಹೂಡಲಾಗುವುದು.
ನಡತೆಯನ್ನು ಸುಧಾರಿಸಿಕೊಳ್ಳದಿದ್ದರೇ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇಂದಿನಿಂದ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ರೌಡಿ ಚಟುವಟಿಕೆಗಳಿಂದ ಸಮಾಜದ ಶಾಂತಿಗೆ ಭಂಗವುಂಟಾಗುತ್ತಿದೆ. ನಿಮ್ಮ ಏರಿಯಾದಲ್ಲಿ ಇನ್ಮುಂದೆ ಸಣ್ಣ ಪುಟ್ಟ ಅಹಿತರ ಘಟನೆಯಲ್ಲಿ ಪಾಲ್ಗೊಂಡರೂ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ಈಗಲಾದರೂ ಸುಧಾರಿಸಿಕೊಳ್ಳಿ ಎಂದು ಡಿಸಿಪಿ ತಾಕೀತು ಮಾಡಿದರು.