ರೋಹಿತ್ ಫಿಟ್‌ನೆಸ್ ಗಂಗೂಲಿ ಪ್ರತಿಕ್ರಿಯೆ

ನವದೆಹಲಿ, ನ ೩ -ಆಸ್ಟ್ರೇಲಿಯಾ ಪ್ರವಾಸದ ಮೂರೂ ಸ್ವರೂಪದ ಭಾರತ ತಂಡವನ್ನು ಕಳೆದ ವಾರ ಬಿಸಿಸಿಐ ಪ್ರಕಟಿಸಿತ್ತು. ಸೀಮಿತ ಓವರ್‌ಗಳ ಭಾರತ ತಂಡದ ಉಪ ನಾಯಕ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಅವರನ್ನು ಆಯ್ಕೆಯಾಗಿರಲಿಲ್ಲ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು “ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಅವರ ಗಾಯವನ್ನು ನಿರ್ವಹಿಸುತ್ತಿದ್ದೇವೆ. ಇಶಾಂತ್ ಶರ್ಮಾ ಟೆಸ್ಟ್ ಸರಣಿಗೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ಸರಣಿಗೆ ಫಿಟ್ ಆಗಬೇಕೆಂಬುದು ನಮ್ಮ ಆಶಯ. ಬಲಗೈ ಬ್ಯಾಟ್ಸ್‌ಮನ್ ಫಿಟ್ ಆಗಿದ್ದೇ ಆದಲ್ಲಿ, ಆಯ್ಕೆದಾರರು ಅವರ ಸೇರ್ಪಡೆ ಬಗ್ಗೆ ಯೋಚನೆ ಮಾಡಲಿದ್ದಾರೆ,” ಎಂದು ಹೇಳಿದರು.
ಸದ್ಯ ರೋಹಿತ್ ಶರ್ಮಾ ಯುಎಇಯಲ್ಲಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾಗೆ ತೆರಳಿದ ನಂತರ ಈ ಇಬ್ಬರೂ ತಡವಾಗಿ ಪ್ರಯಾಣ ಬೆಳೆಸಲಿದ್ದಾರೆ. ಆಸ್ಟ್ರೇಲಿಯಾಗೆ ವಿಮಾನಗಳು ಲಭ್ಯವಿದೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರದೇ ತಂಡದ ವಿರುದ್ಧ ಆಡುವುದು ತುಂಬಾ ಕಠಿಣ. ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮರಳಿರುವುದರಿಂದ ತಂಡ ತುಂಬಾ ಶಕ್ತಿಯುತವಾಗಿದೆ. ಮಾರ್ನಸ್ ಲಾಬುಶೇನ್ ಲಭ್ಯತೆಯಿಂದ ತಂಡ ಇನ್ನಷ್ಟು ಸಮತೋಲನದಿಂದ ಕೂಡಿದೆ. ಭಾರತಕ್ಕೆ ಉತ್ತಮ ಪರೀಕ್ಷೆ ಎದುರಾಗಲಿದೆ. ಆದರೆ ಗೆಲ್ಲಲು ನಮ್ಮವರು ಅರ್ಹರು ಎಂದು ಭಾವಿಸುತ್ತೇನೆ. ಇದು ಅತ್ಯುತ್ತಮ ಸರಣಿ,” ಎಂದು ಗಂಗೂಲಿ ಹೇಳಿದರು.
ಎರಡೂ ತಂಡಗಳಿಗೂ ಗೆಲ್ಲಲು ೫೦-೫೦ ಅವಕಾಶವಿದೆ. ಎಷ್ಟು ರನ್‌ಗಳನ್ನು ಕಲೆ ಹಾಕುತ್ತಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಯಾರೂ ಬ್ಯಾಟಿಂಗ್ ಚೆನ್ನಾಗಿ ಮಾಡುತ್ತಾರೆ ಅವರು ಗೆಲುವು ಪಡೆಯಲಿದ್ದಾರೆ,” ಎಂದು ಭಾರತದ ಮಾಜಿ ನಾಯಕ ತಿಳಿಸಿದ್ದಾರೆ.