ರೋಹಿತ್ ಅಬ್ವರ, ಪಾಕ್ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ

ಅಹಮದಾಬಾದ್, ಫೆ.14- ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಬೌಲರ್ ಗಳ ಸಂಘಟಿತ ಹೋರಾಟದಿಂದ ವಿಶ್ವಕಪ್ ನಲ್ಲಿ ಭಾರತ ಜಯದ ನಾಗಲೋಟ ಮುಂದುವರೆಸಿದೆ.
ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು.
ಭಾರತದ ಪರ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. 23 ರನ್ ಗಳಿಸುವಷ್ಟರಲ್ಲೇ ಗಿಲ್ 11 ರನ್ ಗಳಿಸಿ ಔಟಾದರು.
ನಂತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ರನ್ ಕಲೆಹಾಕಿದರು. ಆದರೆ ಕೊಹ್ಲಿ16 ರನ್ ಗಳಿಸಿ ನಿರ್ಗಮಿಸಿದರು.


ಇನ್ನೊಂದೆಡೆ ನಾಯಕ ರೋಹಿತ್ ಪಾಕ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದರು. 63 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 6 ಬೌಂಡರಿಗಳ ಸಿಡಿಸಿ 86 ರನ್ ಗಳಿಸಿ ಔಟಾದರು. ಪಾಕ್ ಬೌಲರ್ ಗಳನ್ನು ಮನಬಂದಂತೆ ಥಳಿಸಿದರು. ಸಿಕ್ಸರ್, ಬೌಂಡರಿ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು.
ನಂತರ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್. ರಾಹುಲ್ ಜತೆಗೂಡಿ 30.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು192 ರನ್ ಗಳಿಸಿ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಅಯ್ಯರ್ 53 ಹಾಗೂ ಕೆ.ಎಲ್ .ರಾಹುಲ್ 19 ರನ್ ಗಳಿಸಿ ಔಟಾಗದೆ ಉಳಿದರು.

300 ಸಿಕ್ಸರ್

ಏಕದಿನ ಕ್ರಿಕೆಟ್ ನಲ್ಲಿ 300 ಸಿಕ್ಸರ್ ಗಳಿಸಿದ ಕೀರ್ತಿಗೆ ಭಾಜನರಾದರು. ಪಾಕಿಸ್ತಾನದ ಶಾಹಿದ್ ಅಫ್ರಿದಿ 351 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ 331 ಸಿಕ್ಸರ್ ಬಾರಿಸಿದ್ದಾರೆ.
ಈ ಮೂಲಕ ವಿಶ್ವದ ಮೂರನೇ ಬ್ಯಾಟರ್ ಎನಿಸಿದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 556 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಇದಕ್ಕೂ ಮುನ್ನ ಟಾಸ್ ಸೋತು‌‌ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಭಾರತದ‌ ಬೌಲಿಂಗ್ ದಾಳಿಗೆ ತತ್ತರಿಸಿತು.42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು.
ಶಫಿಕ್ ಅಬ್ದುಲ್ಲಾ ಹಾಗೂ ಇಮಾಮ್ ಉಲ್ ಹಕ್ ಮೊದಲ ವಿಕಟ್ ಗೆ 41 ರನ್ ಸೇರಿಸಿದರು. ಶಫೀಕ್ 30 ಹಾಗೂ ಇಮಾಮ್ 36 ರನ್ ಗಳಿಸಿದರು.
ಈ ಇಬ್ಬರೂ ಆಟಗಾರರು ನಿರ್ಗಮಿಸಿದ ನಂತರ ಬಾಬರ್ ಅಜಂ ಮೂರನೇ ವಿಕೆಟ್ ಗೆ 82 ರನ್ ಸೇರಿಸಿದರು. ಅಜಂ 50 ರನ್ ಗಳಿಸಿದರೆ, ರಿಜ್ವಾನ್ 49 ರನ್ ಗಳಿಸಿದರು.
ಉತ್ತಮ‌ ಮೊತ್ತ ದಾಖಲಿಸುವ ಇರಾದೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರತದ ಬೌಲರ್ ಗಳು ತಣ್ಣೀರೆರಚಿದರು. ನಂತರ ಬಂದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.
ಬುಮ್ರಾ, ಪಾಂಡ್ಯ, ಸಿರಾಜ್, ಕುಲ್ದೀಪ್ ಹಾಗೂ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.

ಮೋದಿ ಅಭಿನಂದನೆ

ವಿಶ್ಬಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ‌ ನರೇಂದ್ರ ಮೋದಿ ಅಭಿನಂದನೆ‌ ಸಲ್ಲಿಸಿದ್ದಾರೆ.