ರೋಹಿಣಿ ನಡವಳಿಕೆ ವಿಧಾನಸಭೆಯಲ್ಲಿ ಮಾರ್ಧನಿ:ಜೆಡಿಎಸ್ ಧರಣಿ

ಬೆಂಗಳೂರು, ಸೆ. ೧೫- ಸದನದಲ್ಲಿ ಹಕ್ಕುಚ್ಯುತಿಗೆ ಸಂಬಂಧಿಸಿದ ಪ್ರಸ್ತಾವಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಸದಸ್ಯರು ಕೆಲಕಾಲ ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ವಿಧಾನಸಭೆಯಲ್ಲಿ ಶೂನ್ಯ ವೇಳೆಯ ನಂತರ ಮಾತನಾಡಿದ ಜೆಡಿಎಸ್ ಸದಸ್ಯ ಸಾ.ರಾ. ಮಹೇಶ್, ತಾವು ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಕಳುಹಿಸಿರುವ ಹಕ್ಕುಚ್ಯುತಿ ಪ್ರಸ್ತಾವಕ್ಕೆ ಅವಕಾಶ ನೀಡುವಂತೆ ಕೋರಿದರು.
ಸಭಾಧ್ಯಕ್ಷರು ನಾಳೆ ಅಥವಾ ನಾಡಿದ್ದು ಈ ವಿಷಯ ಪ್ರಸ್ತಾವಕ್ಕೆ ಅವಕಾಶ ನೀಡುತ್ತೇನೆ. ನಿಮ್ಮ ಪ್ರಸ್ತಾಪ ಬಂದಿದೆ ಎಂದು ಹೇಳಿದರು.
ಸಭಾಧ್ಯಕ್ಷರ ಉತ್ತರದಿಂದ ತೃಪ್ತರಾಗದ ಸಾ.ರಾ. ಮಹೇಶ್ ಅವರು ಬ್ಯಾಗ್ ಖರೀದಿ ಸೇರಿದಂತೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ಹಣ ದುರುಪಯೋಗ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಎಲ್ಲವನ್ನು ಹೇಳಬೇಕಿದೆ. ಈಗಲೇ ಅವಕಾಶ ನೀಡಿ ಎಂದು ಪಟ್ಟು ಹಿಡಿದರು.
ಅದಕ್ಕೆ ಸಭಾಧ್ಯಕ್ಷರು, ಅರ್ಥ ಮಾಡಿಕೊಳ್ಳಿ ನಾಳೆ-ನಾಡಿದ್ದು ಅವಕಾಶ ಕೊಡುತ್ತೇನೆ ಎಂದು ಹೇಳಿದರಾದರೂ ಅದಕ್ಕೆ ಒಪ್ಪದ ಸಾ.ರಾ. ಮಹೇಶ್, ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಧರಣಿ ಆರಂಭಿಸಿದರು. ಅವರ ಜತೆ ಅನ್ನದಾನಿ ಸೇರಿದಂತೆ ಜೆಡಿಎಸ್‌ನ ಕೆಲ ಸದಸ್ಯರು ಜತೆಗೂಡಿದರು.
ಇದರಿಂದ ಜೆಡಿಎಸ್ ಸದಸ್ಯರ ಧರಣಿಯಿಂದ ಸಿಟ್ಟಿಗೆದ್ದ ಸಭಾಧ್ಯಕ್ಷರು, ಜೆಡಿಎಸ್‌ನ ರೇವಣ್ಣನವರಿಗೆ ನೀವು ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ಶಾಸಕರು ಗೆದ್ದು ಬಂದಿದ್ದಾರೆ. ನಾನು ನಾಳೆ-ನಾಡಿದ್ದು ಅವಕಾಶ ಕೊಡುತ್ತೇನೆ ಎಂದು ಹೇಳಿದರೂ ಈಗಲೇ ಕೊಡಿ ಎನ್ನುವುದು ಸರಿಯಲ್ಲ. ಸಭಾಧ್ಯಕ್ಷರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ನಿಮ್ಮ ಸದಸ್ಯರಿಗೆ ಧರಣಿ ವಾಪಸ್ ತೆಗೆದುಕೊಳ್ಳಲು ಹೇಳಿ ಎಂದು ಸೂಚಿಸಿದರು. ಹಾಗೆಯೇ ನಾಳೆ ಅಥವಾ ನಾಡಿದ್ದು ಅವಕಾಶ ಕೊಡುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದ ನಂತರ ಸಾ.ರಾ. ಮಹೇಶ್ ಹಾಗೂ ಇತರ ಸದಸ್ಯರು ಧರಣಿ ಕೈಬಿಟ್ಟು ತಮ್ಮ ಸ್ಥಾನಗಳಿಗೆ ವಾಪಸ್ಸಾದರು.