ರೋವರ್ಸ ಸರ್ವೆ ಯಂತ್ರ ವಿತರಣೆ

ಧಾರವಾಡ,ಫೆ26: ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ರೈತರ ಜಮೀನುಗಳ ಸರ್ವೆ ಕಾರ್ಯ ತ್ವರೀತಗೊಳಿಸಲು ರೈತಸ್ನೇಹಿ ರೋವರ್ಸ ಅತ್ಯಾಧುನಿಕ ಯಂತ್ರ ವಿತರಿಸಿದರು.
ಧಾರವಾಡ ಜಿಲ್ಲೆಗೆ ಸರಕಾರ, ಕರಾರುವಾಕ್ಕಾಗಿ, ತ್ವರಿತವಾಗಿ ಸರ್ವೆ ಮಾಡುವ, ಐದು ರೋವರ್ಸ್ ಯಂತ್ರಗಳನ್ನು ನೀಡಿದ್ದು, ವಿನಯ ಕುಲಕರ್ಣಿ ಅವರು ಧಾರವಾಡ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮೋಹನ ಶಿವಣ್ಣವರ ಅವರಿಗೆ ಕಿತ್ತೂರು ಸರಕಾರಿ ಪ್ರವಾಸಿ ಮಂದಿರದಲ್ಲಿ ವಿತರಿಸಿದರು. ನಂತರ ಅವರು ಮಾತನಾಡಿ, ರೈತರು ತಮ್ಮ ಜಮೀನು ಸರ್ವೆ, ಹಿಸ್ಸಾ ಎಂಟ್ರಿ, ಹದ್ದಬಸ್ತು ಮಾಡಿಸುವುದು ಮುಂತಾದವುಗಳಿಗಾಗಿ ಅರ್ಜಿ ಸಲ್ಲಿಸಿ, ವರ್ಷಾನುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಮಷಿನ್ ದಿಂದ ಸರ್ವೆ ಮಾಡಲು ಖಾಸಗಿ ಅವರು ವಿಪರಿತ ಚಾರ್ಜ ಮಾಡುತ್ತಾರೆ. ಇದರಿಂದ ರೈತರಿಗೆ ಶೋಷಣೆ ಆಗುತ್ತಿದೆ. ಮದ್ಯವರ್ತಿಗಳ ಹಾವಳಿ, ಖಾಸಗಿಯವರ ಹೆಚ್ಚು ಹಣದ ಬೇಡಿಕೆ ತಪ್ಪಿಸಿ, ಇಲಾಖೆಯಿಂದಲೇ ತ್ವರಿತವಾಗಿ ಸರ್ವೆ ಕಾರ್ಯ ಕೈಗೊಳ್ಳಲು ಈ ಆಧುನಿಕ ಉಪಕರಣ ರೋವರ್ಸ್ ನೀಡಲಾಗಿದೆ ಎಂದು ಅವರು ತಿಳಿಸಿದರು. ರೈತರ ಸಾವಿರಾರು ಅರ್ಜಿಗಳು ಬಾಕಿ ಇವೆ ಎಂದು ರೈತರು ದೂರುತ್ತಿದ್ದಾರೆ. ಇಲಾಖೆ ಅಧಿಕಾರಿಗಳು, ಧಾರವಾಡ ತಾಲೂಕು ಸೇರಿದಂತೆ ಬೇಡಿಕೆ ಹೆಚ್ಚಿರುವ ತಾಲೂಕುಗಳಲ್ಲಿ ಈ ರೋವರ್ಸ್ ಯಂತ್ರ ಬಳಿಸಿ, ಸರ್ವೆ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕೆಂದು ಹೇಳಿದರು. ಸರಿಸುಮಾರು ಒಂದು ಗಂಟೆಯಲ್ಲಿ ಶೇ.99 ರಷ್ಟು ಕರಾರುವಕ್ಕಾಗಿ ಒಂದು ಜಮೀನು ಸರ್ವೆ ಮಾಡಬುದಾದ ಆಧುನಿಕ ಉಪಕರಣ ರೋವರ್ಸ್ ಯಂತ್ರವನ್ನು ರೈತರ ಜಮೀನುಗಳ ಸರ್ವೆ ಕೆಲಸಕ್ಕಾಗಿ ಪ್ರಥಮವಾಗಿ ಧಾರವಾಡ ಜಿಲ್ಲೆಗೆ ಸರಕಾರ ನೀಡಿದೆ. ಇದನ್ನು ಬಳಸಿಕೊಂಡು ಬಾಕಿ ಅರ್ಜಿಗಳನ್ನು ಪರಿಶೀಲಿಸಿ, ಶೀಘ್ರವಾಗಿ ಅಧಿಕಾರಿಗಳು ವಿಲೇವಾರಿ ಮಾಡಬೇಕು ಎಂದು ಶಾಸಕ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಭೂ ದಾಖಲೆಗಳ ಧಾರವಾಡ ತಾಲೂಕಿನ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್. ಎಫ್. ಸಿದ್ದನಗೌಡರ, ರೈತ ಮುಖಂಡರಾದ ಪ್ರಕಾಶ ಘಾಟಗೆ, ಅರವಿಂದ ಏಗನಗೌಡರ, ಸಂಜೀವ ಲಕ್ಕಮನಹಳ್ಳಿ ಹಾಗೂ ಧಾರವಾಡ ತಾಲೂಕಿನ ತಪಾಸಕರಾದ ಆರ್.ಸಿ.ದೇಸಾಯಿ, ಭೂಮಾಪಕರಾದ ಮಹಾಂತೇಶ ಬಾಗಿ ಮತ್ತು ಧಾರವಾಡ ತಾಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರು, ಜನಪ್ರತಿನಿಧಿಗಳು, ರೈತರು, ಭೂದಾಖಲೆಗಳ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.