
ಪಾಂಡವಪುರ: ಮಾ.14:- ಮೂರು ಬಾರಿ ಶಾಸಕನಾಗಿ, ಒಮ್ಮೆ ಸಂಸದ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿರುವ ನಾನು ವಿರೋಧಿಗಳಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಹೊರವಲಯದಲ್ಲಿರುವ ಹೊಸಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕ್ಯಾತನಹಳ್ಳಿ ಜಿ.ಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ 50ಸಾವಿರ ಲೀಡ್‍ನಲ್ಲಿ ಗೆದ್ದೇ ಗೆಲ್ತೇನೆ. ಪ್ರತಿ ಚುನಾವಣೆಯಲ್ಲೂ 10 ಸಾವಿರ ಲೀಡ್ ಕೊಡುತ್ತಿದ್ದ ದುದ್ದ ಹೋಬಳಿಯವರು 2023 ರ ಚುನಾವಣೆಯಲ್ಲಿ 15 ಸಾವಿರ ಲೀಡ್ ಕೊಟ್ಟು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕ್ಯಾತನಹಳ್ಳಿ ಜಿ.ಪಂ ವ್ಯಾಪ್ತಿ ಆಸ್ಪತ್ರೆ ಮೇಲ್ದರ್ಜೆ, ಪದವಿ ಕಾಲೇಜು ಮಂಜೂರು, ಎಲೆಕೆರೆ ಆದರ್ಶ ಶಾಲೆ, ಕಟ್ಟೇರಿ ಕೆಜಿಬಿವಿ ಶಾಲೆ, ಶ್ಯಾದನಹಳ್ಳಿ ಚೆಕ್ ಡ್ಯಾಂ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ.
ಅರಳಕುಪ್ಪೆ ವ್ಯಾಪ್ತಿಯ ಸೀತಾಪುರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಯಲ್ಲಿ ಗದ್ದೆ ನಾಟಿ ಮಾಡಿಸಿ, 100ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕೆಲಸ ಮಾಡಿಸಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಸೀತಾಪುರದವರು ಪಾಂಡವಪುರಕ್ಕೆ ಬರುವಷ್ಟರಲ್ಲಿ ಮೈಸೂರಿಗೆ ಹೋಗಿ ಕಾಫಿ ಕುಡಿದು ಬರಬಹುದಾದಷ್ಟು ಹತ್ತಿರವಿದೆ ಎಂದರು.
ರೈತಸಂಘದಿಂದ ಅಭಿವೃದ್ಧಿಗೆ ಅಡ್ಡಿ:
ಪುಟ್ಟರಾಜುಗೆ ಹೆಸರು ಬರುತ್ತೆ ಎಂದು ರೈತಸಂಘದವರು ಸೀತಾಪುರ ಸೇತುವೆ ನಿರ್ಮಾಣಕ್ಕೆ ಅಡ್ಡಿಪಡಿಸಿದ್ರು. ಪಕ್ಷಿಧಾಮಕ್ಕೆ ತೊಂದರೆಯಾಗುತ್ತದೆ ಎಂದು ಕೇಸ್ ಹಾಕಿಸಿದ್ರು, ಆದರೆ ಅದ್ಯಾವುದು ನಡೆಯಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಅಂದಿನ ಸಿಎಂ ಧರ್ಮಸಿಂಗ್ ಅವಧಿಯಲ್ಲಿ ಚೆನ್ನೈ ಮೂಲದ ಕೊಠಾರಿ ಷುಗರ್ಸ್‍ಗೆ 7 ವರ್ಷಕ್ಕೆ 87ಕೋಟಿ ರೂ.ಗೆ ಮೊದಲ ಬಾರಿಗೆ ಖಾಸಗಿಗೆ ವಹಿಸಿ ಸಾಲ ತೀರುವಿಕೆಗೆ ಮುಂದಾಗಿದ್ದೆ. ಆದರೆ ರೈತಸಂಘದವರು 2 ವರ್ಷ ಕೂಡ ನಡೆಯಲು ಬಿಡಲಿಲ್ಲ. ಕಾರ್ಖಾನೆ ಮುಚ್ಚಿಸುವ ಹುನ್ನಾರ ನಡೆಯಿತು. ಬಳಿಕ ಮಂತ್ರಿಯಾದ ವೇಳೆ ಕ್ಯಾಬಿನೆಟ್‍ನಲ್ಲಿ ಟೆಂಡರ್‍ಗೆ ಇರಿಸಿದ್ದೆ. ನಂತರ 405 ಕೋಟಿಗೆ ನಿರಾಣಿಯವರು ಗುತ್ತಿಗೆ ಪಡೆದು ಕಾರ್ಖಾನೆ ಚೆನ್ನಾಗಿ ನಡೆಯುತ್ತಿದೆ. ಪಿಎಸ್‍ಎಸ್‍ಕೆ ಕಾರ್ಖಾನೆ ಚಾಲನೆ ಮಾಡಿಸಿದ್ದವರು ಯಾರಾದರೂ ಇದ್ದರೆ ಅದು ನಿಮ್ಮ ಮನೆ ಮಗ ಪುಟ್ಟರಾಜು ಮಾತ್ರ ಎಂಬುದನ್ನು ಮನಗಾಣಬೇಕು ಎಂದರು.
ಕೆಂಪೂಗೌಡ ತರಾಟೆಗೆ :
ವಿದೇಶದಲ್ಲಿ ಕಂಪೆನಿ ತೆರೆಯುವುದು ಕ್ರಷರ್ ಓಪನ್ ಮಾಡಿದಂತಲ್ಲ ಎಂದಿರುವ ರೈತಸಂಘದ ಕೆಂಪೂಗೌಡರೇ, ನೀವಂದುಕೊಂಡಿರುವಷ್ಟು ನಾನು ದಡ್ಡ ಅಲ್ಲ. ಇಡೀ ವಿಶ್ವದಲ್ಲಿ ನನ್ನದೇ ಆದ ಸ್ನೇಹಿತರನ್ನು ಸಂಪಾದಿಸಿದ್ದೀನಿ. ಪುಟ್ಟರಾಜು ಶಾಸಕರಾಗಿದ್ದಾಗ ಕ್ರಷರ್ ಎಷ್ಟಿತ್ತು, ನಿಮ್ಮ ನಾಯಕ ಪುಟ್ಟಣ್ಣಯ್ಯ ಶಾಸಕರಾಗಿದ್ದಾಗ ಕ್ರಷರ್ ಎಷ್ಟಿತ್ತು ಎಂಬುದು ತಿಳಿದಿದೆ. ಈ ರೀತಿಯ ಬೂಟಾಟಿಕೆ ಮಾತು ಬೇಡ. ಗೌರವಯುತವಾಗಿ ಮಾತನಾಡೋದು ಕಲಿಯಿರಿ. ಮೈಕ್ ಸಿಗುತ್ತೆ ಎಂದು ಲಘುವಾಗಿ ಮಾತಾಡುವುದನ್ನು ಬಿಡಿ ಎಂದು ತರಾಟೆಗೆ ತೆಗೆದುಕೊಂಡರು.
ಅಭಿವೃದ್ಧಿ ಕೆಲಸ ಮಾಡಲೋದಾಗ ಪ್ರತಿಹಂತದಲ್ಲೂ ರೈತಸಂಘದವರು ಕಾಲೆಳೆಯುವ ಕೆಲಸ ಮಾಡಿದ್ರು, ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್ ಮಾಡಲು ಮುಂದಾದೆ. ಆಗಲೂ ಅಡ್ಡಿಪಡಿಸಿದರು. ಅರಳಕುಪ್ಪೆಯಲ್ಲಿ 4 ಸೇತುವೆ ಕೆಲಸ ಮಾಡಿಸಲು ಹೋದಾಗಲು ಇದೇ ಕೆಂಪೂಗೌಡ ತಡೆದು ಅಡಚಣೆ ಮಾಡಿದ್ರು ಎಂದರು.
ಇದೇ ವೇಳೆ ಹಾರೋಹಳ್ಳಿ, ಚಲುವರಸನಕೊಪ್ಪಲು ಇತರೆ ಗ್ರಾಮಗಳಿಂದ ರೈತಸಂಘದ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಜಿ.ಪಂ ಮಾಜಿ ಸದಸ್ಯ ಸಿ.ಅಶೋಕ್,ಕ್ಯಾತನಹಳ್ಳಿ ಪ್ರವೀಣ್, ಎಸ್‍ಟಿಜಿ ಶಿಕ್ಷಣ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಗ್ರಾ.ಪಂ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಶ್ಯಾದನಹಳ್ಳಿ ಚಲುವರಾಜು, ಗುರುಸ್ವಾಮಿ, ಪ್ರವೀಣ್, ಮಲ್ಲೇಶ್ ಇತರರಿದ್ದರು.