ರೋಟರಿ ಶಾಲೆಗೆ ತಾತ್ಕಾಲಿಕ ತಡೆಗೋಡೆ

ವಿಜಯಪುರ.ಫೆ೧೪:ಪಟ್ಟಣದ ರೋಟರಿ ಶಾಲೆಯ ಮಕ್ಕಳು ಆಟವಾಡುತ್ತಿದ್ದ ಜಾಗದಲ್ಲಿ ಪುರಸಭೆಯವರು ಸೋಮವಾರ ಮುಂಜಾನೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ.
ಬೆಳಗಿನ ಜಾವ ೪ ಗಂಟೆಯ ಸುಮಾರಿಗೆ ಜೆಸಿಬಿಗಳೊಂದಿಗೆ ತೆರಳಿದ ಪುರಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು, ತಗಡಿನ ಶೀಟ್ ಗಳಿಂದ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಿ, ಶಾಲೆಯ ವಿದ್ಯಾರ್ಥಿಗಳು ಓಡಾಡುತ್ತಿದ್ದ ಹಾಗೂ ಆಟವಾಡುತ್ತಿದ್ದ ಜಾಗವನ್ನು ಸಂಪೂರ್ಣವಾಗಿ ಮುಚ್ಚಿದ್ದು, ವಿದ್ಯಾರ್ಥಿಗಳು, ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದ ಮುಂಭಾಗದಿಂದ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಕಿರಿದಾದ ಜಾಗದಲ್ಲಿ ಶಾಲೆಗೆ ಬರುವಂತಾಗಿದೆ.
ಜ.೨೬ ರಂದು ಜೆಸಿಬಿಗಳ ಮೂಲಕ ರೋಟರಿ ಶಾಲೆಗೆ ಹಾಕಿದ್ದ ತಡೆಗೋಡೆ ಹಾಗೂ ನಾಮಫಲಕಗಳನ್ನು ತೆರವುಗೊಳಿಸಲಾಗಿತ್ತು. ಈ ವೇಳೆ ರೋಟರಿ ಸಂಸ್ಥೆಯವರು ಪುರಸಭೆಯ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಫೆ.೩ ರವರೆಗೂ ತಾತ್ಕಾಲಿಕವಾಗಿ ಯಾವುದೇ ಚಟುವಟಿಕೆ ಮಾಡದಂತೆ ತಡೆ ನೀಡಿತ್ತು. ಫೆ.೩ ರಂದು ಪುರಸಭೆಯಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ತಾತ್ಕಾಲಿಕ ತಡೆಯನ್ನು ಮುಂದುವರೆಸದೇ ಮಾ.೭ ಕ್ಕೆ ವಿಚಾರಣೆ ಮುಂದೂಡಲಾಗಿರುವ ಕಾರಣ, ಪುರಸಭೆಯವರು ಬೆಳಗಿನ ಜಾವ ೪ ಗಂಟೆಗೆ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿ, ಈ ಜಾಗಕ್ಕೆ ಯಾರೂ ಅಕ್ರಮವಾಗಿ ಪ್ರವೇಶ ಮಾಡದಂತೆ ಕಸಸಾಗಾಣಿಕೆಯ ವಾಹನಗಳನ್ನು ಅಡ್ಡ ನಿಲ್ಲಿಸಿದ್ದಾರೆ.
ರೋಟರಿ ಸಂಸ್ಥೆಯ ಸದಸ್ಯ ಎನ್.ರುದ್ರಮೂರ್ತಿ ಮಾತನಾಡಿ, ನಾವು ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇವೆ. ಆದರೆ, ಪುರಸಭೆಯವರು ಹಾಗೂ ಕೆಲವರು ಪಟ್ಟಭದ್ರ ಹಿತಾಸಕ್ತಿಗಳು ಒಂದುಗೂಡಿ, ಇದೇ ಜಾಗದಲ್ಲೆ ಇಂದಿರಾ ಕ್ಯಾಂಟೀನ್ ಮಾಡಬೇಕು ಎಂದು ಹಠ ಹಿಡಿದು, ರೋಟರಿ ಶಾಲೆಯನ್ನು ಸಂಪೂರ್ಣವಾಗಿ ಮುಚ್ಚಿಹಾಕುವಂತಹ ಹುನ್ನಾರ ನಡೆಸಿದ್ದಾರೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ. ಜಿಲ್ಲಾಧಿಕಾರಿಗಳಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಇಂದಿರಾ ಕ್ಯಾಂಟೀನ್ ಎಲ್ಲಿ ಬೇಕಾದರೂ ಕಟ್ಟಬಹುದು. ಆದರೆ, ಶಿಕ್ಷಣ ಸಂಸ್ಥೆಯನ್ನು ಇಲ್ಲಿಂದ ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಫೆ.೩ ರಂದು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮಾ.೭ ಕ್ಕೆ ಮುಂದೂಡಿದ ಕಾರಣ ನ್ಯಾಯಾಲಯದ ತಡೆಯಾಜ್ಞೆಯೂ ಸಹ ಮಾರ್ಚ್-೭ ರವರೆಗೆ ಇದ್ದು, ಪುರಸಭೆಯವರು ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿರುತ್ತಾರೆ. ಅವರು ಮಾಡುವ ಕೆಲಸ ನ್ಯಾಯವೇ ಆಗಿದ್ದಲ್ಲಿ ರಾತ್ರೋರಾತ್ರಿ ಕಾಂಪೌಂಡ್ ನಿರ್ಮಿಸಲು ಹೋಗುತ್ತಿರಲಿಲ್ಲ. ನಾವು ನ್ಯಾಯಾಲಯದ ಮೇಲೆ ಭರವಸೆ ಇಟ್ಟಿದ್ದೇವೆ. ನಮಗೆ ನ್ಯಾಯ ಸಿಗುವ ನಂಬಿಕೆಯಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸಂತೋಷ್.ಜಿ.ಆರ್ ಅವರು ಮಾತನಾಡಿ, ಸದರಿ ಜಾಗದಲ್ಲಿ ಫೆ.೩ ರವರೆಗೂ ಯಾವುದೇ ಚಟುವಟಿಕೆ ಮಾಡಬಾರದು ಎಂದು ನ್ಯಾಯಾಲಯದಿಂದ ತಾತ್ಕಾಲಿಕ ತಡೆ ನೀಡಿದ್ದರು. ನಾವೂ ಯಾವುದೇ ಚಟುವಟಿಕೆ ಮಾಡಿರಲಿಲ್ಲ. ಇದು ಪುರಸಭೆಯ ಆಸ್ತಿ, ಇದನ್ನು ಉಳಿಸುವುದು ನಮ್ಮ ಕರ್ತವ್ಯ. ಫೆ.೩ ರಂದು ನಾವು ವಕೀಲರ ಮೂಲಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ತಡೆಯನ್ನು ಮುಂದುವರೆಸಿಲ್ಲ. ಆದ್ದರಿಂದ ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು, ತಗಡಿನ ಶೀಟ್ ಗಳಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದೇವೆ ಎಂದರು.
ಮಕ್ಕಳಿಗೆ ಅನುಕೂಲವಾಗಬೇಕು: ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ಪುಟ್ಟಣ್ಣ ಈ ಕುರಿತು ಪ್ರತಿಕ್ರಿಯೆ ನೀಡಿ, ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಮಕ್ಕಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಧರ್ಮಪುರದ ಅಂಜನಪ್ಪ ರವರು ಮಾತನಾಡುತ್ತಾ ಸರ್ಕಾರಿ ಜಾಗವಾಗಿದ್ದರೂ, ಶಾಲಾ ಮಕ್ಕಳು ಆಟವಾಡಿಕೊಳ್ಳುತ್ತಿದ್ದ ಈ ಜಾಗದಲ್ಲಿ ನೂರಾರು ಮಂದಿ ರೋಟರಿ ಸಂಸ್ಥೆಯಿಂದ ಪ್ರತಿ ತಿಂಗಳು ನಡೆಯುತ್ತಿರುವ ಉಚಿತ ನೇತ್ರ ತಪಾಸಣೆಗಾಗಿಯೂ ಬಂದಿದ್ದು, ಇಂತಹ ಸೇವಾ ಕಾರ್ಯ ನಡೆಯುತ್ತಿರುವ ಜಾಗವನ್ನು ಪುರಸಭೆಯವರು ದುಂಡಾವರ್ತಿಯಾಗಿ ಕಾಂಪೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಎಷ್ಟು ಮಾತ್ರ ಸರಿ ಐದು ವರ್ಷಗಳ ಕಾಲ ಆಡಳಿತ ನಡೆಸಲು ಬಂದವರು ಸಾರ್ವಜನಿಕರಿಗೆ ಉಪಕಾರವನ್ನು ಮಾಡುತ್ತಿಲ್ಲ ಇಂತಹ ಹೇಸಿಗೆ ಕೆಲಸ ಮಾಡುವುದು ಎಷ್ಟು ಸರಿಎಂದು ಪ್ರಶ್ನಿಸಿದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ತಪಾಸಣೆಗೆಂದು ಆಗಮಿಸಿದ್ದ ಕಾಕಚೊಕ್ಕಂಡ ಹಳ್ಳಿಯ ನಾರಾಯಣಸ್ವಾಮಿ ರವರು ಮಾತನಾಡಿ ದ್ವೇಷದ ರಾಜಕಾರಣ ಎಂದಿಗೂ ಸರಿಯಲ್ಲವೆಂದು ರೋಟರಿ ಸಂಸ್ಥೆಯವರು ಏನಾದರೂ ಈ ಜಾಗದಲ್ಲಿ ಅಂಗಡಿ ಮಳಿಗೆಗಳನ್ನೇನಾದರೂ ಕಟ್ಟಿದ್ದಾರೆಯೇ ಇಲ್ಲವೇ ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿ ಕೇವಲ ಶಾಲಾ ಮಕ್ಕಳ ಆಟದ ಮೈದಾನವಾಗಿ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುವ ಸಲುವಾಗಿ ಈ ಜಾಗವನ್ನು ಬಳಸುತ್ತಿರುವುದನ್ನು ನೋಡಿ ಸಹಿಸಲು ಸಾಧ್ಯವಾಗದ ಪುರಸಭೆಯವರು ಎಂತಹ ವ್ಯಕ್ತಿಗಳೆಂದು ಪ್ರಶ್ನಿಸಿದರು.
ಕಣ್ಣಿನ ತಪಾಸಣೆಗೆ ಆಗಮಿಸಿದ್ದ ನಿವೃತ್ತ ಬಿಎಂಟಿಸಿ ಸಂಚಾರ ನಿಯಂತ್ರಕರಾದ ನಾರಾಯಣಸ್ವಾಮಿ ರವರು ಮಾತನಾಡಿ ವೈಯಕ್ತಿಕ ದ್ವೇಷ ಸಾಧನೆಗಳು ಏನಾದರೂ ಇರಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕಾದದ್ದು ಪುರಸಭೆಯವರ ಜವಾಬ್ದಾರಿ ಆಗಿದ್ದು, ಕೂಡಲೇ ಶಾಲಾ ಮಕ್ಕಳು ಹಾಗೂ ವಯಸ್ಸಾದ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.