ರೋಟರಿ ವಿಜಯಪುರ ಅಗರ್ತಲ ಈಶಾನ್ಯ ರಾಜ್ಯದ ಧ್ವಜ ವಿನಿಮಯ

ವಿಜಯಪುರ.ಡಿ೧೦:ವಸುದೈವ ಕುಟುಂಬಕಂ ಎಂಬುದು ನಮ್ಮ ಸಂಸ್ಕೃತಿಯ ಮೂಲ ಮಂತ್ರವಾಗಿದೆ ಎಂದು ಪಟ್ಟಣದ ರೋಟರಿ ವಿಜಯಪುರದ ಅಧ್ಯಕ್ಷೆ ಎ.ಎಂ ಮಂಜುಳಾ ತಿಳಿಸಿದರು.
ಇವರು ಪಟ್ಟಣದ ರೋಟರಿ ಪ್ರೌಢಶಾಲೆಯ ಪ್ರಸಾದ ನಿಲಯದ ಆವರಣದಲ್ಲಿ ರೋಟರಿ ವಿಜಯಪುರ ಹಮ್ಮಿಕೊಂಡಿದ್ದ ಈಶಾನ್ಯ ರಾಜ್ಯಗಳ ರೋಟರಿ ಧ್ವಜ ವಿನಿಮಯ ಕಾರ್ಯಕ್ರಮದಲ್ಲಿ ತ್ರಿಪುರ ರಾಜ್ಯದ ಅಗರ್ತಲ ರೋಟರಿ ಧ್ವಜವನ್ನು ಸ್ವೀಕರಿಸಿ ಮಾತನಾಡಿ ಈ ಭಾರತವು ಅನೇಕ ಜನಾಂಗಗಳು ಹಾಗೂ ವಿವಿಧ ಪಂಗಡಗಳು ಇರುವಂತಹ ಒಂದು ವಿಶಾಲ ರಾಷ್ಟ್ರ ವಾಗಿದ್ದು ಇಲ್ಲಿ ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಜಾತಿಗಳ ಜನರು ತಮ್ಮ ವಿವಿಧತೆಯನ್ನು ಮರೆತು ನಾವೆಲ್ಲರೂ ಒಂದೇ ಭಾರತೀಯರು ಎಂದು ಜೀವಿಸುತ್ತಿದ್ದಾರೆ ಇದರ ಅರ್ಥವೇ ಏಕತೆ. ಆದ್ದರಿಂದ ಈ ರೀತಿಯ ರಾಷ್ಟ್ರೀಯ ಮನೋ ಭಾವನೆಯನ್ನು ಹೊಂದಿರುವುದೇ ನಮ್ಮ ಈ ದೇಶ ಭಾರತ ರಾಷ್ಟ್ರೀಯ ಭಾವೈಕ್ಯತೆಯ ದೇಶವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಆಕಾಶವಾಣಿ ವಿವಿಧ ಭಾರತಿಯ ಹಿರಿಯ ಉದ್ಷೋಷಕ ಆರ್.ಸುನೀಲ್ ಕುಮಾರ್ ಮಾತನಾಡಿ ಭಾವೈಕ್ಯತೆ ಎಂದರೆ ಜನರು ವಾಸಿಸುವ ತಮ್ಮ ವೈವಿಧ್ಯತೆಗಳನ್ನು ಅವರ ಜಾತಿ, ಮತ, ಧರ್ಮ, ವರ್ಗ, ಪಂಥ, ಭಾಷೆ, ಸಂಸ್ಕೃತಿಗಳ ಭಿನ್ನತೆಯನ್ನು ತೊರೆದು ಒಟ್ಟಾಗಿ ಬಾಳುವುದೇ ರಾಷ್ಟ್ರೀಯ ಭಾವೈಕ್ಯತೆಯ ಅರ್ಥವಾಗಿದೆ. ಈ ದೇಶದಲ್ಲಿ ಎಲ್ಲರೂ ಒಂದಾಗಿ ಸಾಮರಸ್ಯದಿಂದ ಬಾಳುವುದು ಏಕತೆಯಲ್ಲಿ ವಿವಿಧತೆಯನ್ನು ನಾವು ಕಾಣುವ ಮಹಾನ್ ರಾಷ್ಟ್ರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ, ಶಿಡ್ಲಘಟ್ಟ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ಎನ್.ಎಸ್.ಎಸ್ ಸ್ವಯಂಸೇವಕ ಎನ್.ಚನ್ನಕೇಶವ ಯಾದವ್, ವಿಜಯಪುರ ಪಟ್ಟಣ ಪುರಸಭೆಯ ಮಾಜಿ ಅಧ್ಯಕ್ಷೆ ಅನುಸೂಯಮ್ಮ ಸಂಪತ್, ಪಟ್ಟಣದ ರೋಟರಿ ಶಾಲೆಯ ಶಿಕ್ಷಕಿ ಕಲಾವತಿ ಬಿ ರಿತ್ತಿ, ರೋಟರಿ ವಿಜಯಪುರದ ಕಾರ್ಯದರ್ಶಿ ಎಂ. ಗಿರಿಜಾಂಬ,ಎಸ್ ಬಸವರಾಜ್,ಚ. ವಿಜಯ ಬಾಬು,ಎಸ್. ಪುನೀತ್ ಕುಮಾರ್,ಎನ್. ರುದ್ರ ಮೂರ್ತಿ,ಸಿ.ಸುರೇಶ್, ಕಿರಣ್ ಕುಮಾರ್ ಮೊದಲಾದವರು ಹಾಜರಿದ್ದರು.