ರೋಟರಿ ಪದಾಧಿಕಾರಿಗಳು ಉತ್ತಮ ಸೇವಾಕಾರ್ಯಗಳ ನಡೆಸಲು ಮುಂದಾಗಬೇಕು

ಸಂಜೆವಾಣಿ ವಾರ್ತೆ 

ಹಿರಿಯೂರು.ಮಾ.೨; ರೋಟರಿ  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಒಂದು ವರ್ಷದ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಜನರಿಗೆ ಸಾಮಾಜಿಕವಾಗಿ ಉತ್ತಮ ಸೇವಾ ಕಾರ್ಯಗಳನ್ನು ನಡೆಸಲು ಮುಂದಾಗಬೇಕು ಎಂಬುದಾಗಿ ರೋಟರಿ ಜಿಲ್ಲಾ ಗವರ್ನರ್ ಮಾಣಿಕ್ ಎಸ್ ಪವಾರ್ ಸೂಚನೆ ನೀಡಿದರು.ನಗರದ ರೋಟರಿ ಸಭಾಭವನದಲ್ಲಿ ರೋಟರಿ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಒಮೇಗಾ ರೀಹ್ಯಾಬ್ ಫೆಡರೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕೃತಕ ಕೈಕಾಲು ಜೋಡಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ವ್ಹೀಲ್ ಚೇರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೋಟರಿ ವತಿಯಿಂದ ಬಡವರಿಗೆ, ಹಿಂದುಳಿದವರಿಗೆ ಅನುಕೂಲವಾಗುವ  ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದು, ಈ ಶಿಬಿರದಲ್ಲಿ ಪಾಲ್ಗೊಳ್ಳುವ ವೈದ್ಯ ವೃಂದದವರೂ ಸಹ ಉತ್ತಮ ವೈದ್ಯಕೀಯ ಸೇವೆ ನೀಡುವ ಮೂಲಕ ಶಿಬಿರಾರ್ಥಿಗಳ ಆರೋಗ್ಯ ರಕ್ಷಣೆಯಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು ಎಂಬುದಾಗಿ ಹೇಳಿದರು.ರೋಟರಿ ಅಧ್ಯಕ್ಷರಾದ ಡಿ.ದೇವರಾಜಮೂರ್ತಿ ಮಾತನಾಡಿ, ಈ ದಿನ ರೋಟರಿಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಒಮೇಗಾ ರೀಹ್ಯಾಬ್ ಫೆಡರೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂಗ ವೈಫಲ್ಯರಿಗಾಗಿ ಶಿಬಿರವನ್ನು ರೂಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂಬುದಾಗಿ ಹೇಳಿದರು.ಜಿಲ್ಲಾ ರೋಟರಿ ಅಸಿಸ್ಟೆಂಟ್ ಗೌವರ್ನರ್ ಉಮೇಶ್ ತುಪ್ಪದ್ ಮಾತನಾಡಿ, ನಗರದ ರೋಟರಿಸಂಸ್ಥೆ ಸದಾ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ರೊ.ಲೇ.ಚಂದ್ರಯ್ಯನವರ ಪರೋಪಕಾರ ಮನೋಭಾವವನ್ನು ಅವರ ಮಗ ರೋ.ಕೆ.ಸಿ.ಪ್ರವೀಣ್ ಅಳವಡಿಸಿಕೊಂಡು ಈದಿನದ ಬೃಹತ್ ಕಾರ್ಯಕ್ರಮದ ರುವಾರಿಗಳಾಗಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.ರೆಡ್ ಕ್ರಾಸ್ ವೈಸ್ ಚೇರ್ಮನ್ ಎ.ರಾಘವೇಂದ್ರ ಮಾತನಾಡಿ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಹಿರಿಯ ವೈದ್ಯರುಗಳಾದ ಡಾ.ಮಲ್ಲಿಕಾರ್ಜುನ್ ಕಾರ್ಡಿಯಾಲಜಿ, ಡಾ,ನಿತೀಶ್ ಇಎನ್.ಟಿ ಸರ್ಜನ್, ಎಕೋಟೆಕ್ನಿಷಿಯನ್ ರಾಹುಲ್, ಕಾರ್ಲಿನ್, ಕಾರ್ತಿಕ್ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರಲ್ಲದೆ, ನಾಲ್ಕು ಜನ ಅಂಗವಿಕಲರಿಗೆ ರೋಟರಿ ವತಿಯಿಂದ ಉಚಿತ ವ್ಹೀಲ್ ಚೇರ್ ವಿತರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಮ್ಮ 50ನೇ ಹುಟ್ಟುಹಬ್ಬದ ಅಂಗವಾಗಿ ಈ ದಿನದ ಕಾರ್ಯಕ್ರಮದ ಪ್ರಾಯೋಜಕರಾದ ರೋಟೇರಿಯನ್ ಕೆ.ಸಿ.ಪ್ರವೀಣ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.