ರೋಟರಿ ಕ್ಲಬ್ ಯೋಜನೆಗೆ ಅನುದಾನ

ಬೀದರ್:ಜು.22: ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್‍ನ ಜನೋಪಯೋಗಿ ಯೋಜನೆಗೆ ಶಾಸಕರ ನಿಧಿಯಿಂದ ಅನುದಾನ ಒದಗಿಸಲಾಗುವುದು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದರು.

ನಗರದ ಚಿಕ್ಕಪೇಟೆ ರಸ್ತೆಯಲ್ಲಿ ಇರುವ ಇನ್‍ಸ್ಪೈರ್ ರಿಟ್ರೀಟ್ ರೆಸಾರ್ಟ್‍ನಲ್ಲಿ ನಡೆದ ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್‍ನ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಕ್ಲಬ್ ಸಮಾಜ ಸೇವಾ ಚಟುವಟಿಕೆಗಳಿಗೆ ಹೆಸರಾಗಿದೆ. ನಾನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಶಾಸಕನಾಗಲು ಸಹ ರೋಟರಿ ಕ್ಲಬ್ ಪ್ರೇರಣೆಯೇ ಕಾರಣವಾಗಿದೆ ಎಂದು ಹೇಳಿದರು.

ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಮಾತನಾಡಿ, ರೋಟರಿ ಕ್ಲಬ್ 200 ದೇಶಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯವಾಗಿದೆ. ಕ್ಲಬ್‍ನ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ರೋಟರಿ ಸೆವೆನ್ ಏರಿಯಾಸ್ ಆಫ್ ಫೋಕಸ್ ಜಿಲ್ಲಾ ಚೆರ್‍ಮೆನ್ ಬಸವರಾಜ ಧನ್ನೂರ ಮಾತನಾಡಿ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಯಶಸ್ವಿ 25 ವರ್ಷ ಪೂರೈಸಿದೆ. ನವೆಂಬರ್‍ನಲ್ಲಿ ಬೆಳ್ಳಿ ಹಬ್ಬ ಸಮಾರಂಭ ಜರುಗಲಿದೆ. ಇದರ ಸವಿ ನೆನಪಿಗಾಗಿ ವಿಶೇಷ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕ್ಲಬ್ ನೂತನ ಅಧ್ಯಕ್ಷ ಸಂಗಮೇಶ ಆಣದೂರೆ ಮಾತನಾಡಿ, ನನ್ನ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ರೋಟರಿ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಅತ್ಯುತ್ತಮ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಯತ್ನಿಸುವೆ ಎಂದು ತಿಳಿಸಿದರು.

ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸಂತಪುರ ಠಾಣೆ ಪಿಎಸ್‍ಐ ಸಿದ್ದು ಸಿರಿಗೌಡ, ವಡಗಾಂವ್ ಪಿಎಚ್‍ಸಿಯ ಶುಶ್ರೂಷಾಧಿಕಾರಿ ಸುಜಾತಾ, ನೌಬಾದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಮಾಧುರಿ ಕುಲಕರ್ಣಿ, ಬೀದರ್ ನಗರಸಭೆಯ ಕಾರ್ಮಿಕ ನಾರಾಯಣ, ದಂತ ವೈದ್ಯ ಡಾ. ಉಲ್ಲಾಸ್ ಕಟ್ಟಿಮನಿ ಹಾಗೂ ನೀಟ್‍ನಲ್ಲಿ 368ನೇ ರ್ಯಾಂಕ್ ಗಳಿಸಿದ ಆದರ್ಶ ರಾಜಕುಮಾರ ರಟಕಲೆ ಅವರನ್ನು ಸನ್ಮಾನಿಸಲಾಯಿತು.

ಶೇಖರ್ ರಾಗಾ ನೂತನ ಪದಾಧಿಕಾರಿಗಳ ಪದಗ್ರಹಣ ಪ್ರಕ್ರಿಯೆ ನಡೆಸಿಕೊಟ್ಟರು. ರೋಟರಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಯಲಾಲ್, ಕ್ಲಬ್ ಕಾರ್ಯದರ್ಶಿ ಗುಂಡಪ್ಪ ಗೋಧೆ, ಖಜಾಂಚಿ ಸಚಿನ್ ಮಹೇಶ್ವರಿ ಮೊದಲಾದವರು ಇದ್ದರು.

ನಿಕಟಪೂರ್ವ ಅಧ್ಯಕ್ಷ ಸತ್ಯಪ್ರಕಾಶ ವರದಿ ವಾಚಿಸಿದರು. ರೋಟರಿ ಹಿರಿಯ ಸದಸ್ಯರಾದ ಜಹೀರ್ ಅನ್ವರ್ ಹಾಗೂ ಡೊನಾಲ್ಡ್ ಜಾನ್ಸನ್ ನಿರೂಪಿಸಿದರು.