ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜು.೧೪ : ಬಾಣಂತಿಯರು ಪೌಷ್ಠಿಕ ಆಹಾರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ರೋಟರಿ ವಲಯ ಹತ್ತರ ಸಹಾಯಕ ರೋ.ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು.ಅಶೋಕನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ವತಿಯಿಂದ ನಡೆದ ಬಾಣಂತಿಯರ ಮಡಿಲು ಕಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಪಂಚದ ಎಲ್ಲ ರೋಟರಿ ಕ್ಲಬ್‌ಗಳು ಜುಲೈ ತಿಂಗಳನ್ನು ಮಕ್ಕಳ ಹಾಗೂ ತಾಯಿಯ ಆರೋಗ್ಯದ ಉನ್ನತಿಗಾಗಿ ಮೀಸಲಿಟ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ. ತಾಯಂದಿರು ಹಾಗೂ ಮಕ್ಕಳ ಪೌಷ್ಠಿಕಾಂಶ ಉತ್ತಮಗೊಳಿಸುವ ಹಾಗೂ ಅವರಿಗೆ ಉಪಯೋಗವಾಗುವಂತಹ ವಸ್ತುಗಳನ್ನು ನೀಡುವುದಕ್ಕೆ ರೋಟರಿ ಸಂಸ್ಥೆ ಉದಾರ ಕೊಡುಗೆಗಳನ್ನು ನೀಡುತ್ತದೆ ಎಂದರು.ಭಾರತದAತಹ ದೇಶದಲ್ಲಿ ಪೌಷ್ಠಿಕಾಂಶ ಕೊರತೆಯ ಅನೇಕ ಉದಾಹರಣೆಗಳು ಇಂದಿಗೂ ಇವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ. ಈಗಾಗಲೇ ಪೋಲಿಯೋ ನಿರ್ಮೂಲನೆಗೆ ಕಳೆದ 40 ವರುಷಗಳಿಂದ ಕೆಲಸ ಮಾಡಿ ಭಾರತ ಪೊಲೀಯೋ ಮುಕ್ತ ಎಂದು ಗುರುತಿಸಲು ಕಾರಣವಾಗಿದೆ ಎಂದು ವಿವರಿಸಿದರು.ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯದಂತಹ ಮುಖ್ಯ ವಿಷಯಗಳ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದೆ. ದೇಶದ ಮಕ್ಕಳು ಸುಶಿಕ್ಷಿತರಾಗುವ ಕಡೆಗೆ ಗಮನ ನೀಡಬೇಕು ಹಾಗೂ ಅವರ ಆರೋಗ್ಯದ ಬಗ್ಗೆಯೂ ಸಾಮಾಜಿಕವಾಗಿ ಕಾಳಜಿ ತೆಗೆದುಕೊಳ್ಳಬೇಕು ಎಂಬುದು ನಮ್ಮ ಧ್ಯೇಯ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಪಂಚದ 35 ಸಾವಿರ ಕ್ಲಬ್‌ಗಳು ಕೆಲಸ ಮಾಡುತ್ತಿವೆ ಎಂದು ವಿವರಿಸಿದರು.ತಾಯಂದಿರು ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನಗಹರಿಸಬೇಕಾಗುತ್ತದೆ. ಕಾಲಕಾಲಕ್ಕೆ ಅವರಿಗೆ ನೀಡಬೇಕಾದ ಪೌಷ್ಠಿಕ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಸರಕಾರಿ ಸಂಸ್ಥೆಗಳು ಇದರ ಬಗ್ಗೆ ಅವರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿವೆ. ಕಾಲದಿಂದ ಕಾಲಕ್ಕೆ ನಿಖರವಾಗಿ ಆರೋಗ್ಯ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳು ನೀಡುವ ಸಲಹೆ ಸೂಚನೆ ಪಾಲಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋ.ರೇಣುಕಾರಾಧ್ಯ ಮಾತನಾಡಿ, ತಾಯಂದಿರ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ನಡೆಸುವ ಅನೇಕ ಕಾರ್ಯಕ್ರಮದಲ್ಲಿ ಮಡಿಲು ಕಿಟ್ ವಿತರಣೆ ಒಂದಾಗಿದೆ. ಈ ಮೂಲಕ ಎಲ್ಲರು ತಮ್ಮ ಬಾಲ್ಯದ ನೆನೆಪುಗಳನ್ನು ಮತ್ತೆ ಸ್ಮರಿಸುವ ಹಾಗೂ ಶ್ರಮಿಕ ಹಾಗೂ ಬಡ ತಾಯಂದಿರ ತೊಂದರೆಗಳನ್ನು ದೂರ ಮಾಡುವ ಸಣ್ಣ ಪ್ರಯತ್ನವಾಗಿದೆ ಎಂದು ಹೇಳಿದರು.