ಕೋಲಾರ,ಅ,೧೩-ಮಾನವ ಜನ್ಮ ಪಡೆಯುವುದೇ ಪುಣ್ಯವಾಗಿರುವಾಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಧನ್ಯತೆ ಭಾವ ಪಡೆದುಕೊಳ್ಳಬೇಕು ಎಂದು ರೋಟರಿ ಜೋನ್ ಗವರ್ನರ್ ಎಚ್.ರಾಮಚಂದ್ರಪ್ಪ ತಿಳಿಸಿದರು.
ತಾಲೂಕಿನ ಬೀರಾಂಡಹಳ್ಳಿ ಸತ್ಯಸಾಯಿ ವೃದ್ದಾಶ್ರಮದಲ್ಲಿ ಕೋಲಾರ ರೋಟರಿ ಕ್ಲಬ್ ಹಾಗೂ ಶ್ರೀ ಗಂಗಾನೀಕೇತನ ಫೌಂಡೇಶನ್, ಸಿರಿಗನ್ನಡ ವೇದಿಕೆಯಿಂದ ರೋಟರಿ ಕಲ್ಪವೃಕ್ಷ ಯೋಜನೆಯಡಿ ರೈತರಿಗೆ ೨೦೦ ತೆಂಗಿನಕಾಯಿ ಸಸಿ ವಿತರಣೆ, ಸತ್ಯಸಾಯಿ ವೃದ್ದಾಶ್ರಮಕ್ಕೆ ಅಗತ್ಯ ವಸ್ತುಗಳ ವಿತರಣೆ, ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿ, ಉಳ್ಳವರು ದಾನಮಾಡುವ ರೂಢಿ ಬೆಳೆಸಿಕೊಂಡು ಸಮಸಮಾಜ ನಿರ್ಮಾಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜನ್ಮ ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಸಂಸ್ಥೆಯಿಂದ ಹಲವಾರು ರೀತಿ ಸಮಾಜಕ್ಕೆ ಸಹಾಯ ಮಾಡುತ್ತಿದ್ದು, ಸೇವಾ ಕಾರ್ಯ ಮುಂದುವರೆಸಿಕೊಂಡು ಹೋಗಲು ಎಲ್ಲರ ಬೆಂಬಲ, ಸಹಕಾರ ಅತ್ಯಾವಶ್ಯಕ, ಮನುಷ್ಯರಿಗೆ ಬೇಕಾದ ಸವಲತ್ತುಗಳನ್ನು ತಲಪಿಸುವುದೇ ರೋಟರಿ ಸಂಸ್ಥೆಯ ಗುರಿಯಾಗಿದ್ದು, ನಮ್ಮೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಕೋಲಾರ ರೋಟರಿ ಸಂಸ್ಥೆಯ ಕಾರ್ಯದರ್ಶಿ ನಾಗಾನಂದ ಕೆಂಪರಾಜ್, ರೋಟರಿಯನ್ ಸುಧಾಕರ್, ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ಎಸ್.ವಿ.ನಾಗರಾಜ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರಗೌಡ, ಸತ್ಯಸಾಯಿ ವೃದ್ದಾಶ್ರಮ ವ್ಯವಸ್ಥಾಪಕಿ ಸುಲೋಚನಾ, ರೋಟರಿಯನ್ ಅಶ್ವಥ್, ಚಕ್ರವರ್ತಿ, ರೋಟರಿ ಕಾರ್ಯದರ್ಶಿ ಸುರೇಶ್, ಜೋಷನ್, ರೋಟರಿ ಬಂಗಾರಪೇಟೆ ಜೋನ್ ಅಧ್ಯಕ್ಷ ಎಲ್.ರಾಮಕೃಷ್ಯ, ಕೆಜಿಎಫ್ ರೋಟರಿ ಪ್ರೈಮ್ ಅಧ್ಯಕ್ಷ ಶೌಕತ್‌ವುಲ್ಲಾಖಾನ್ ಇದ್ದರು.