ರೋಟರಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು, ನ. 7- ರೋಟರಿ ಸಂಸ್ಥೆಗಳು, ಸಾಮಾಜಿಕ, ಆರ್ಥಿಕ, ಆರೋಗ್ಯ ಸೇವೆ ಮಾಡುವ ಮೂಲಕ ಕನ್ನಡ, ಸಂಸ್ಕೃತಿ, ಭಾಷೆ, ಜಾನಪದ ಕಲೆ, ಗ್ರಾಮೀಣ ಸಂಸ್ಕೃತಿಯ ಮೂಲ ಕಲೆಗಳನ್ನು ಉಳಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿವೆ ಎಂದು ಜಿಲ್ಲಾ ರೋಟರಿ ೩೧೯೦ ಮಾಧ್ಯಮ ಮುಖ್ಯಸ್ಥ ಕೆ.ಟಿ.ನಿರಂಜನ್ ಹೇಳಿದರು.
ವಿಶ್ವನೀಡಂ ರೋಟರಿ ಸಂಸ್ಥೆಯು ವಿನಾಯಕನಗರ, ಕಲ್ಯಾಣನಗರ, ಡಿ.ಗ್ರೂಪ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಮತ್ತು ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ಜಾನಪದ ಕಲೆಗಳ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಶ್ವವ್ಯಾಪ್ತಿಯಲ್ಲಿ ರೋಟರಿ ಸಂಸ್ಥೆ ಆರೋಗ್ಯ, ಶಿಕ್ಷಣ, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾಜಿಕ ಪರಿವರ್ತನೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಸೇವೆಯಲ್ಲಿ ಮುಂಚೂಣಿಯಲ್ಲಿವೆ ಎಂದರು.
ವಿಶ್ವನೀಡಂ ರೋಟರಿ ಅಧ್ಯಕ್ಷ ಉಮೇಶ್ ಮಾತನಾಡಿ ರೋಟರಿ ಸಂಸ್ಥೆಯಲ್ಲಿರುವ ಎಲ್ಲ ಸದಸ್ಯರು ಸಮಾಜಕ್ಕೆ ಕೈಲಾದ ಸೇವೆ ಮಾಡಬೇಕೆಂದು ಹಂಬಲವಿಟ್ಟುಕೊಂಡು ಜನಪರವಾದ ಕಾರ್ಯಕ್ರಮ ನೀಡುವಲ್ಲಿ ಮುಂಚೂಣಿಯಲ್ಲಿವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಹೊಸಹಳ್ಳಿ ಸತೀಶ್ ಮಾತನಾಡಿ ರೋಟರಿ ಸಂಸ್ಥೆಗಳಿಗೆ ಸರ್ಕಾರ ಮತ್ತು ಸಂಘಸಂಸ್ಥೆಗಳಿಂದ ಯಾವುದೇ ಅನುದಾನ ಬರುವುದಿಲ್ಲ. ತಾವು ಸಂಪಾದಿಸಿದ ಹಣದಲ್ಲಿ ಇಂತಿಷ್ಟು ಸಮಾಜಸೇವೆಗೆಂದೆ ತೆಗೆದಿರಿಸಿ ಆ ಹಣದಲ್ಲಿ ಸೇವೆ ಮಾಡುತ್ತಿವೆ ಎಂದು ಪ್ರಶಂಸಿದರು.
ರೋಟರಿಯ ಹಿರಿಯರಾದ ಲಕ್ಷ್ಮಣ್, ಶಂಕರ್, ರಾಜು, ರಾಮಣ್ಣ ಇದ್ದರು.