
ಸಂಜೆವಾಣಿ ವಾರ್ತೆ
ಹೊಸಪೇಟೆ ಏ 8: ರಾಜಸ್ತಾನದ ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ ಹನುಮಾಪುರ ಹಾಗೂ ರೋಟರಿ ಕ್ಲಬ್ ಹೊಸಪೇಟೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ನಗರದ ರೋಟರಿ ಕ್ಲಬ್ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಆಯುಷ್ಯ ಇಲಾಖೆಯ ಜಿಲ್ಲಾ ಉಪ ಆರೋಗ್ಯಾಧಿಕಾರ ಡಾ. ಮುನಿವಾಸುದೇವ ರೆಡ್ಡಿ, ಇಂದಿನಿಂದ ಆರಂಭವಾಗಿರುವ ಆರೋಗ್ಯ ಶಿಬಿರ ಏಪ್ರೀಲ್ 14ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಉಚಿತ ಆಕ್ಯೂಪ್ರೆಶರ್, ಸುಜೋಕ್ ಮ್ಯಾಗ್ನೆಟ್ ಮತ್ತು ವೈಬ್ರೇಷನ್ ಥೆರಪಿ ಚಿಕಿತ್ಸೆ ಸೇರಿದಂತೆ ಇತರೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಇಂದಿನ ಒತ್ತಡದ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕೀಲು ನೋವು, ಮಂಡಿಚಿಪ್ಪು ಸವಕಳಿ ಸೇರಿ ಅನೇಕ ಕಾಯಿಲೆಗಳು ಇಂದು ಸಾಮಾನ್ಯವಾಗಿ ಎಲ್ಲಾ ವಯೋಮಾನದವರಿಗೂ ಕಾಡುತ್ತಿವೆ. ಅಶಕ್ತರು, ಬಡಜನತೆಗೆ ಇಂತಹ ಉಚಿತ ಶಿಬಿರಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಆರೋಗ್ಯದ ವಿಷಯದಲ್ಲಿ ರೋಟರಿ ಕ್ಲಬ್ ಇಂತಹ ಅನೇಕ ಶಿಬಿರಗಳನ್ನು ಮಾಡುವ ಮೂಲಕ ಜನತೆಗೆ ಅನುಕೂಲ ಮಾಡಿಕೊಟ್ಟಿದೆ. ಇದನ್ನು ಜನತೆಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಜ್ಜನ್ ಕಯಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಲಬ್ ಆವರಣದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಹಾಗೂ ಸಂಜೆ 4ರಿಂದ ರಾತ್ರಿ 8ರ ವರೆಗೆ ವಿವಿಧ ವಿಷಯಗಳ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. ಪ್ರತಿಯೊಬ್ಬರೂ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯವಂತರಾಗಿ ಇರಬೇಕು ಎಂದು ಮನವಿ ಮಾಡಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಸತ್ಯನಾರಾಯಣ, ಶಿಬಿರದ ಪ್ರಾಯೋಜಕ ಪ್ರಹ್ಲಾದ ಭೂಪಾಳ, ಡಾ. ಮನಮೋಹನ್ ಸೇರಿದಂತೆ ಇತರೆ ವೈದ್ಯರು, ರೋಟರಿ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಶಿಬಿರದಲ್ಲಿ ಇದ್ದರು.