ರೋಗ ಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ : ಡಾ.ಜೈಶೀಲಾ

ಔರಾದ : ಜೂ.28:ದೈನಂದಿನ ಜೀವನದಲ್ಲಿ ಮನುಷ್ಯ ಒತ್ತಡದಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ, ರೋಗ ಮುಕ್ತ ಜೀವನಕ್ಕೆ ಯೋಗ ಅಭ್ಯಾಸ ಮಾಡಬೇಕೆಂದು ಡಾ. ಜೈಶೀಲಾ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಬದುಕಿನ ಒತ್ತಡದಲ್ಲಿ ಪ್ರತಿದಿನ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು, ಯೋಗಾಭ್ಯಾಸ ಮಾಡಿದರೆ ಆಯಸ್ಸು ಹೆಚ್ಚಾಗುವುದರ ಜೊತೆಗೆ ರೋಗ ತಡೆಗಟ್ಟಿ ಆರೋಗ್ಯವನ್ನು ಸಂಪೂರ್ಣವಾಗಿ ವೃದ್ದಿಸಿಕೊಳ್ಳಬಹುದಾಗಿದೆ ಎಂದರು.

ಪ್ರಾಂಶುಪಾಲ ಡಾ. ಸೂರ್ಯಕಾಂತ ಚಿದ್ರೆ ಅವರು ಮಾತನಾಡಿ ಯೋಗ ಅಭ್ಯಾಸದಿಂದ ಸದೃಢವಾದ ದೇಹವನ್ನು ಮಾತ್ರವಲ್ಲ, ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ, ಆದ್ದರಿಂದ ಪ್ರತಿಯೊಬ್ಬರು ಯೋಗ ಅಭ್ಯಾಸಕ್ಕಾಗಿ ಸಮಯ ಮೀಸಲಿಡಬೇಕು ಎಂದರು.

ದೈಹಿಕ ಶಿಕ್ಷಣ ಸಂಯೋಜಕಿ ಡಾ. ಊರ್ವಶಿ ಕೊಡ್ಲಿ ಅವರು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ತಡಾಸನ, ವೃಕ್ಷಾಸನ, ಹಸ್ತಪಾದಾಸನ, ತ್ರಿಕೋನಾಸನ, ಅರ್ಧಚಕ್ರಾಸನ, ಗರುಡಾಸನ ಸೇರಿದಂತೆ ವಿವಿಧ ಆಸನ ಮಾಡಿಸಿದರು

ಈ ಸಂದರ್ಭದಲ್ಲಿ ಡಾ.ಅಶೋಕ ಕೋರೆ, ಸಂಜೀವಕುಮಾರ ತಾಂದಳೆ, ವೇದಪ್ರಕಾಶ ಆರ್ಯ, ಸಂಯೋಜಕರಾದ ಡಾ. ಅಶೋಕ ಕೋರೆ, ವಿನಾಯಕ ಕೊತಮಿರ, ಅಂಬಿಕಾದೇವಿ, ರೆಡ್ ಕ್ರಾಸ್ ಸಮಿತಿಯ ಸಂಯೋಜಕ ಮಹೇಶಕುಮಾರ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.