ರೋಗ ನಿವಾರಕ ಮಾತ್ರೆಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಿ: ಡಿಸಿ


ಬಳ್ಳಾರಿ,ಜು.31: ವಾಂತಿ, ಭೇದಿ ಹಾಗೂ ಇನ್ನಿತರೆ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ರೋಗಗಳಿಗೆ ಸಂಬಂಧಿಸಿದಂತೆ ಓಆರ್‍ಎಸ್ ಪುಡಿ ಹಾಗೂ ಜಂತುಹುಳು ನಾಶಕ ಮಾತ್ರೆಗಳು ಕುರಿತಂತೆ ಜನ ಸಾಮಾನ್ಯರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ಅಂತರ್ ಇಲಾಖಾ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆ.01ರಿಂದ ಆ.15ರವರೆಗೆ ಅಭಿಯಾನವನ್ನು ಕೈಗೊಳ್ಳಬೇಕಾಗಿದ್ದು, ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ತೀವ್ರತರ ಅತಿಸಾರ ಭೇದಿಯಿಂದ ಉಂಟಾಗುವ ಮರಣಗಳನ್ನು ತಡೆಯಲು ಓಆರ್‍ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆ ವಿತರಣೆಯ ಕುರಿತು ವ್ಯಾಪಕ ಪ್ರಚಾರ ಮತ್ತು ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಮುಖ್ಯವಾಗಿ ಓಆರ್‍ಎಸ್ ದ್ರಾವಣ ತಯಾರಿಕಾ ದಿನಾಂಕ ಮತ್ತು ಅದರ ಅವಧಿ ಮುಕ್ತಾಯಗೊಳ್ಳುವ ದಿನಾಂಕದಿಂದ ಬಳಕೆ ಮಾಡಬಾರದು ಎಂದು ಜನಸಾಮಾನ್ಯರಿಗೆ ಹೆಚ್ಚು ಜಾಗೃತಿ ಅರಿವು ಮೂಡಿಸಬೇಕು, ಅದರಲ್ಲೂ ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಅರಿವು ಜಾಗೃತಿಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆ ವ್ಯಾಪ್ತಿಯಲ್ಲಿ 1,94,081 ಮಕ್ಕಳಿಗೆ ಓಆರ್‍ಎಸ್ ದ್ರಾವಣವನ್ನು 15 ದಿನದೊಳಗೆ ತಲುಪಿಸುವ ಗುರಿಯನ್ನು ಹೊಂದಿದ್ದು, ಒಟ್ಟು 2,53,892 ಓಆರ್‍ಎಸ್ ದ್ರಾವಣದ ಪ್ಯಾಕೇಟ್‍ಗಳು ಮತ್ತು 51,280 ಜಿಂಕ್ ಮಾತ್ರೆಗಳನ್ನು ವಿತರಿಸಲು ಸಂಗ್ರಹಿಸಿಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ವಾಂತಿ-ಭೇದಿ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದರು.
ಆ.10ರಿಂದ ಆ.17ರವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯನ್ನು ಹಮ್ಮಿಕೊಳ್ಳಬೇಕಾಗಿದ್ದು, ಒಂದು ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ (ಶಾಲೆಗಳು, ಅಂಗನವಾಡಿಗಳು ಮತ್ತು ಕಾಲೇಜುಗಳಲ್ಲಿ) ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ನೀಡಬೇಕು. ಮಾತ್ರೆಗಳನ್ನು ತಿನ್ನದಂತೆ ಬರೀ ಚೀಪುವಂತೆ ಸಲಹೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟು ಜಿಲ್ಲಾದ್ಯಾಂತ 6,31,565 ಮಕ್ಕಳಿಗೆ ನೀಡಲು ವಿತರಣಾ ಗುರಿಯನ್ನು ಹೊಂದಿದ್ದು, ಅದರಲ್ಲಿ 6,94,722 ಮಾತ್ರೆಗಳು ಲಭ್ಯವಿದ್ದು, ವಿತರಣೆಗೆ ಸಂಬಂಧಿಸಿದಂತೆ ಶಾಲೆ-ಕಾಲೇಜು, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ತರಬೇತಿ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ.ಲಿಂಗಮೂರ್ತಿ, ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನೀಲ್‍ಕುಮಾರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಿಜಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ವಡಗೇರಿ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಎಸ್.ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.