ರೋಗ ನಿರೋಧಕ ಶಕ್ತಿ ಹೆಚ್ಚಿಸಸುವ ಆಹಾರಗಳು

ನಿಯಮಿತವಾಗಿ ಪೌಷ್ಠಿಕ ಆಹಾರ ಸೇವಿಸಿದರೆ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ ಯಾವುದೇ ರೀತಿಯ ಕಾಯಿಲೆಗಳು ನಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬಹುದಾಗಿದೆ. ಅದರಲ್ಲೂ ಈಗಿನ ಕಾಲಘಟ್ಟದಲ್ಲಿ ಅತಿ ಹೆಚ್ಚು ಕಾಡುತ್ತಿರುವ ಕೊರೊನಾ ಸೋಂಕಿನಿಂದಲೂ ಕೂಡ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ನಿಯಮಿತ ಆರೋಗ್ಯ ಪದ್ಧತಿ ಸಹಕಾರಿಯಾಗಿದೆ. ಇದು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತದೆ.
ಮೊಸರು: ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿದ್ದು, ನಮ್ಮ ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ರಚನೆಗೆ ಸಹಾಯ ಮಾಡುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಮೊಸರನ್ನು ಹೊಸದಾಗಿ ತಯಾರಿಸಬೇಕು. ಇಲ್ಲವಾದಲ್ಲಿ ನೋವಿರುವ ಗಂಟಲನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ. ಆದರೆ ಉತ್ತಮ ರೋಗನಿರೋಧಕ ಶಕ್ತಿಗಾಗಿ, ನಿಮಗೆ ಪ್ರೋಬಯಾಟಿಕ್‌ಗಳು ಬೇಕಾಗುತ್ತವೆ ಈ ನಿಟ್ಟಿನಲ್ಲಿ ಪೂರಕ ಅಂಶಗಳನ್ನು ಆಶ್ರಯಿಸಬಹುದು
ಅರಿಶಿಣ: ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ರಾಮಬಾಣ ಎಂದೇ ಹೆಸರುವಾಸಿಯಾಗಿರುವುದು ಅರಿಶಿಣ. ಇದರಲ್ಲಿ ಇರುವ ರೋಗನಿರೋಧಕ ಶಕ್ತಿ ಗಾಯ ಮತ್ತು ಇನ್ನಿತರ ಸೋಂಕಿತ ಅಂಶಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ಜನರು ಹೆಚ್ಚಾಗಿ ಅರಿಶಿಣವನ್ನು ಹಾಲಿನಲ್ಲಿ ಬೆರೆಸಿ ಕುಡಿಯುತ್ತಾರೆ. ಆದರೆ ಹಲವರಿಗೆ ಅರಿಶಿಣದ ಮೇಲೆ ತಪ್ಪು ಅಭಿಪ್ರಾಯಗಳಿದೆ. ನೀವು ಅರಿಶಿಣವನ್ನು ಸೇವಿಸುವುದಾದರೆ ಅದನ್ನು ನೀರಿನೊಂದಿಗೆ ಬೆರಸಬೇಡಿ ಬದಲಿಗೆ ಅದನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದು ಉತ್ತಮ. ಇನ್ನು ಅರಿಶಿಣವನ್ನು ನೀವು ತೆಂಗಿನ ಎಣ್ಣೆ ಮತ್ತು ಕರಿಮೆಣಸಿನೊಂದಿಗೆ ಕೂಡ ಉಪಯೋಗಿಸಬಹುದು
ನೈಸರ್ಗಿಕ ಸೋಂಕು ನಿವಾರಕ ಆಹಾರಗಳು: ತುಳಸಿ ಎಲೆಗಳು, ಚಕ್ರ ಮೊಗ್ಗು, ಬೆಳ್ಳುಳ್ಳಿ ಮತ್ತು ಶುಂಠಿ ನೈಸರ್ಗಿಕ ಸೋಂಕು ನಿವಾರಕ ಆಹಾರ ಪದಾರ್ಥಗಳಾಗಿವೆ. ಈ ಪದಾರ್ಥಗಳು ಜ್ವರದಿಂದಲೂ ರಕ್ಷಣೆ ನೀಡುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಇದು ಸಹಾಯಕವಾಗಿದೆ. ಮೂರರಿಂದ ನಾಲ್ಕು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ . ಇನ್ನು ಚಕ್ರ ಮೊಗ್ಗುಗಳನ್ನು ಮೂರರಿಂದ ನಾಲ್ಕು ತುಂಡುಗಳನ್ನಾಗಿ ಮಾಡಿ ನೀರಿನಲ್ಲಿ ಕುದಿಸಿ ಸೇವಿಸಬೇಕು, ಅದೇ ರೀತಿ ಶುಂಠಿ, ನೆಲ್ಲಿಕಾಯಿಯನ್ನು ಕುದಿಸಿ ರಸವನ್ನು ಸೇವಿಸಬೇಕು. ಇನ್ನು ಬೆಳ್ಳುಳ್ಳಿಯನ್ನು ಲವಂಗದ ಜೊತೆಗೆ ಮಿಶ್ರಣ ಮಾಡಿ ಕುದಿಸಿದರೆ ಆಲಿಸಿನ್ ಎಂಬ ಸಂಯುಕ್ತವನ್ನು ಹೊಂದಿರುವ ಪ್ರಬಲವಾದ ಔಷಧೀಯ ಗುಣಗಳನ್ನು ಹೊಂದಿರುವ ಅಂಶ ಹೊರಬರುತ್ತದೆ ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನೆಲ್ಲಿಕಾಯಿ: ಎಲ್ಲಾ ರೀತಿಯ ವಿಟಮಿನ್‌ಗಳಲ್ಲಿ, ವಿಟಮಿನ್ ಸಿ ಮತ್ತು ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ, ನೆಲ್ಲಿಕಾಯಿ, ನಿಂಬೆಹಣ್ಣು, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಒಳಿತು. ಅಲ್ಲದೆ, ಮೊಟ್ಟೆಯ ಹಳದಿ ಮತ್ತು ಅಣಬೆ ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.