
ಕಲಬುರಗಿ:ಮಾ.17: ಮಾನವನಿಗೆ ವಿವಿಧ ಕಾರಣಗಳಿಂದ ಕಾಯಿಲೆಗಳು ಬರುತ್ತವೆ. ಅವುಗಳನ್ನು ನಿವಾರಣೆ, ತಡೆಯಲು ಮತ್ತು ಬರದಂತೆ ಮುಂಜಾಗ್ರತೆಗೆ ಲಸಿಕೆ ಪಡೆಯುವುದು ಅಗತ್ಯವಾಗಿದೆ. ಲಸಿಕೆಗಳು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಲಸಿಕೆಯ ಬಗ್ಗೆ ಭಯ ಪಡದೆ ತೆಗೆದುಕೊಳ್ಳುವುದುರ ಮೂಲಕ, ಬೇರೆಯವರು ಸಹ ತೆಗೆದುಕೊಳ್ಳಲು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರನ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶುಕ್ರವಾರ ಜರುಗಿದ ‘ರಾಷ್ಟ್ರೀಯ ಲಸಿಕೆ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರ ಪ್ರಯುಕ್ತ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಪಡೆದು, ಮಾರಣಾಂತಿಕ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಹಿರಿಯ ಆರೋಗ್ಯ ಸಹಾಯಕಿ ಪುಷ್ಪಾ ಆರ್.ರತ್ನಹೊನ್ನದ್ ಮಾತನಾಡಿ, ಗರ್ಭಿಣಿಗೆ ಟಿಡಿ, ಮಗು ಹುಟ್ಟಿದ ನಂತರ 24 ಗಂಟೆ ಒಳಗಾಗಿ ಜೀರೋ ಪೊಲಿಯೋ ಮತ್ತು ಬಿಸಿಜಿ, 1.5 ತಿಂಗಳಿನ ನಂತರ ಪೆಂಟಾವೈಲೆಂಟ್, ಪೊಲಿಯೋ, ಐಪಿವಿ ಮತ್ತು ರೋಟಾ ಲಸಿಕೆ ನೀಡಬೇಕು. 2.5 ತಿಂಗಳಿಗೆ ಎರಡನೇ ಡೋಸ್ ಮತ್ತು 3.5 ತಿಂಗಳಿಗೆ ಮೂರನೇ ಡೋಸ್ ನೀಡಬೇಕು. 9ರಿಂದ 12ನೇ ತಿಂಗಳೊಳಗಾಗಿ ಮೀಜಲ್ಸ್ ಲಸಿಕೆ, 1.5 ವರ್ಷಕ್ಕೆ ಡಿಪಿಟಿ ಬೂಷ್ಟರ್ ಮತ್ತು ಮೀಜಲ್ಸ್ ಎರಡನೇ ಡೋಸ್ ಲಸಿಕೆ, 5 ವರ್ಷಕ್ಕೆ ಡಿಪಿಟಿ, 10 ವರ್ಷಕ್ಕೆ ಟಿಡಿ, 16 ವರ್ಷಕ್ಕೆ ಟಿಡಿ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ಮಗುವಿಗೆ ಯಾವುದೇ ಕಾಯಿಲೆಗಳನ್ನು ಬರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಜಗನಾಥ ಗುತ್ತೇದಾರ, ಕಿರಣ ಪಾಟೀಲ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.