ರೋಗ ತಡೆಗೆ ಮಕ್ಕಳಿಗೆ ಲಸಿಕೆ ಅಗತ್ಯ-ಅಂಗಡಿ

ನರೇಗಲ್ಲ, ನ 8- ಮಕ್ಕಳ ಉಜ್ವಲ ಭವಿಷ್ಯಕ್ಕೆ ಆರೋಗ್ಯ ಅತಿ ಮುಖ್ಯ. ಈ ನಿಟ್ಟಿನಲ್ಲಿ ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗ ಬರದಂತೆ ಮುಂಜಾಗ್ರತವಾಗಿ ಶಾಲಾ ಮಕ್ಕಳ ವಿಶೇಷ ಲಸಿಕಾ ಅಭಿಯಾನದಡಿ ಪ್ರತಿಯೊಂದು ಮಗು ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಹಾಯಕ ಎಸ್.ಎಫ್. ಅಂಗಡಿ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರ ಜಕ್ಕಲಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಶಾಲಾ ಮಕ್ಕಳಿಗೆ ಚುಚ್ಚು ಮದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲಸಿಕೆ ಪಡೆಯುವುದು ಪ್ರತಿ ಮಗುವಿನ ಹಕ್ಕು. ತಪ್ಪದೇ ಲಸಿಕೆ ಹಾಕಿಸಿದರೆ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುತ್ತದೆ. ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ ಇಲಾಖೆ ಹಾಗೂ ಆಶಾ ಕಾರ್ಯಕರ್ತರು ಕೈ ಜೋಡಿಸಿ, ಲಸಿಕಾ ಅಭಿಯಾನ ಯಶಸ್ವಿಗೊಳ್ಳಿಸಲು ಮುಂದಾಗಬೇಕಾಗಿದೆ. ಪ್ರತಿ ವರ್ಷ ಅಗಸ್ಟ್ ತಿಂಗಳದಲ್ಲಿ ರಾಷ್ಟ್ರೀಯ ಶಾಲಾ ಮಕ್ಕಳ ಚುಚ್ಚು ಮದ್ದು ಕಾರ್ಯಕ್ರಮವನ್ನು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳಿಗೆ ಚುಚ್ಚು ಮದ್ದು ಹಾಕುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್-19 ಇರುವುದರಿಂದ ಮಕ್ಕಳು ಲಸಿಕಾ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 5 ಮತ್ತು 6 ನೇ ವಯಸ್ಸಿನ ಮಕ್ಕಳಿಗೆ ಡಿಪಿಟಿ ವರ್ಧಕ ಲಸಿಕೆ, 10 ಮತ್ತು 16 ವರ್ಷದ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುವುದು. ಮಕ್ಕಳು ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯ ಇರುವುದಿಲ್ಲ. ಒಂದು ವೇಳೆ ಲಸಿಕೆ ಹಾಕಿದ ತಕ್ಷಣ ಜ್ವರ ಬಂದರೆ ಸಮೀಪದ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ವಿ. ಹಿರೇವಡೆಯರ, ಗ್ರಾ.ಪಂ ಮಾಜಿ ಸದಸ್ಯ ಹರ್ಷವರ್ಧನ ದೊಡ್ಡಮೇಟಿ, ಶೋಭಾ ಪಲ್ಲೇದ, ರತ್ನಾ ಶ್ಯಾಶೇಟ್ಟಿ, ಖುತಿಜಾ ಮುಲ್ಲಾ, ರೇಣುಕಾ ತಿಲಗಾರ, ಶ್ರೀದೇವಿ ಆದಿ, ನಿರ್ಮಲಾ ಕೊಪ್ಪದ ಸೇರಿದಂತೆ ಆಶಾ ಕಾರ್ಯಕರ್ತರು ಇದ್ದರು.