ರೋಗ ತಡೆಗಟ್ಟಲು ಮುಂಜಾಗ್ರತಾ ಆರೋಗ್ಯ ತಪಾಸಣೆ ಅಗತ್ಯ

ಚೇಳೂರು, ನ. ೨೪- ಕಾಯಿಲೆ ಬರುವುದಕ್ಕಿಂತ ಮೊದಲೇ ಪ್ರಾಥಮಿಕ ಹಂತದಲ್ಲೇ ಹಲವು ತಪಾಸಣೆಗಳನ್ನು ಮಾಡಿಸಿಕೊಂಡು ಸೂಕ್ತವಾದ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಚೇಳೂರಿನ ವೈದ್ಯಾಧಿಕಾರಿ ಜೆ. ವಿಜಯ್‌ಕುಮಾರ್ ಹೇಳಿದರು.
ಚೇಳೂರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಘಟಕ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಐಸಿಟಿಸಿ ಕೇಂದ್ರ, ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರಿಗೆ ತಪಾಸಣೆ ನಡೆಸಿ ಅವರು ಮಾತನಾಡಿದರು.
ಯಾವ ವ್ಯಕ್ತಿಯೂ ೩೦ ವರ್ಷವಾದ ತಕ್ಷಣವೇ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಅಲ್ಲಿ ಸಣ್ಣಪುಟ್ಟ ಯಾವುದೇ ಕಾಯಿಲೆಗಳ ಲಕ್ಷಣಗಳು ಕಂಡಲ್ಲಿ ಸೂಕ್ತ ಚಿಕಿತ್ಸೆ ನೀಡಬಹುದು. ಅದರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಆರೋಗ್ಯ ತಪಾಸಣೆಯನ್ನು ಕಾಲ ಕಾಲಕ್ಕೆ ಸರಿಯಾಗಿ ಮಾಡಿಸಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬಹುದು. ಇದರ ಜತೆಗೆ ಅದರ ಜತೆಗೆ ಪೌಷ್ಠಿಕ ಆಹಾರ, ಹಣ್ಣುಗಳು, ತರಕಾರಿಯನ್ನು ನಿಯಮಿತವಾಗಿ ಸೇವಿಸಿ. ವೈದ್ಯರ ಸಲಹೆಯಂತೆ ಔಷಧಿಗಳನ್ನು ಕಾಲ ಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ಆರೋಗ್ಯದ ತಪಾಸಣೆ, ಚಿಕಿತ್ಸೆಗಳ ಬಗ್ಗೆ ಯಾವುದೇ ರೀತಿಯಿಂದ ತಾತ್ಸರ ಮಾಡಬೇಡಿ. ಇದರ ಹಿಂದೆ ನಿಮ್ಮ ಕುಟುಂಬದ ರಕ್ಷಣೆಯು ಸಹ ಇರುತ್ತದೆ. ಅದ್ದರಿಂದ ಇಂತಹ ಶಿಬಿರಗಳು ಎಲ್ಲಿಯೇ ನಡೆದರು ತಮ್ಮ ಆರೋಗ್ಯದ ಬಗ್ಗೆ ತಪಾಸಣೆಗಳನ್ನು ಮಾಡಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಆಯುರ್ವೇದ ವೈದ್ಯೆ ಜ್ಯೋತಿ, ಆಪ್ತಸಮಾಲೋಚಕಿ ಲಕ್ಷ್ಮಿ, ಆರೋಗ್ಯ ನಿರೀಕ್ಷಣಾಧಿಕಾರಿ ತಾಹಿರ್, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜಗದೀಶ್, ಪ್ರಯೋಗಾಲಯ ತಜ್ಞರಾದ ಚಾಂದ್‌ಪಾಷ, ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.