ರೋಗಿಗಳ ಸಮಸ್ಯೆ ನಿವಾರಿಸುವ ಡಾ.ಮಂತರ್ ಗೌಡರಿಗೆ ಕ್ಷೇತ್ರದ ಸಮಸ್ಯೆ ಪರಿಹರಿಸುವ ಅವಕಾಶ ಸಿಗುತ್ತಾ?

ಗೆಲುವು ಸುಲಭವೇ? | ಮಂಜಿನನಗರಿಯಲ್ಲಿ ಗಾಳಿ ಯಾವ ಪಕ್ಷದ ಕಡೆ?

ಮಡಿಕೇರಿ : ಮಂಜಿನನಗರಿ ಮಡಿಕೇರಿ ಕ್ಷೇತ್ರದ ಚುನಾವಣಾ ಅಖಾಡ ದಿನೇ ದಿನೇ ರಂಗೇರುತ್ತಲೇ ಇದೆ. ಮಾಜಿ ಸಚಿವರು ಹಾಗೂ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕರಾದ ಎ ಮಂಜು ಅವರ ಪುತ್ರ, ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು, ಮೊನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದು, ಭರ್ಜರಿ ಮತಬೇಟೆ ಜೊತೆಗೆ ಗೆಲುವಿನ ಕುದುರೆ ಏರಲು ತಯಾರಿ ನಡೆಸಿದ್ದಾರೆ. ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಪಕ್ಷದ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಹಾಗೂ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು, ಮತಯಾಚಿಸುತ್ತಿರುವ ಯುವ ನಾಯಕ ಮಂತರ್ ಗೌಡ ಅವರು, ಒಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಇದುವರೆಗಿನ ಚುನಾವಣೆಗಳನ್ನು ಗಮನಿಸಿದರೆ, ಈ ಬಾರಿ ಕಾಂಗ್ರೆಸ್‌ನತ್ತ ಗಾಳಿ ಬೀಸುವ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಸಮುದಾಯಕ್ಕಿಂತ ಗೌಡ, ಇನ್ನಿತರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಈ ಕ್ಷೇತ್ರವನ್ನು ಕೊಡವ ಸಮುದಾಯದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪ್ರತಿನಿಧಿಸುತ್ತಾ ಬಂದಿದ್ದಾರೆ. ಇದು ಈ ಬಾರಿ ಮಂತರ್ ಗೌಡರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಅಲ್ಲದೇ, ಐದು ಬಾರಿ ಒಂದೇ ಮುಖವನ್ನು ನೋಡಿ ಬೇಸತ್ತಿರುವ ಕ್ಷೇತ್ರದ ಜನತೆ ಈ ಬಾರಿ, ಸ್ಟೆತೊಸ್ಕೋಪ್ ಹಿಡಿಯುವ “ಕೈ” ಗೆ ಅಸ್ತು ಎನ್ನಬಹುದು.
ಕೈ ನಾಯಕರ ಲೆಕ್ಕಾಚಾರ ಏನಿರಬಹುದು?
ಮಡಿಕೇರಿ ಕ್ಷೇತ್ರದಲ್ಲಿ ಸುಮಾರು ಏಳು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಆ ಪೈಕಿ ಬಿ.ಎ.ಜೀ ವಿಜಯ, ಎಚ್.ಎಸ್ ಚಂದ್ರಮೌಳಿ, ಡಾ.ಮಂತರ್ ಗೌಡ ಅವರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ಈ ಮೂವರಲ್ಲಿ ಹೈ ಕಮಾಂಡ್ ಎಲ್ಲ ಆಯಾಮಗಳಲ್ಲಿ ಲೆಕ್ಕಾಚಾರ ಹಾಕಿಯೇ ಮಂತರ್ ಗೌಡರಿಗೆ ಟಿಕೆಟ್ ನೀಡಿದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಅರೆಭಾಷೆ ಗೌಡರು ಸೇರಿದಂತೆ ಇತರೆ ಸಮುದಾಯದವರು ಹೆಚ್ಚಿದ್ದು, ಮಂತರ್ ಗೌಡರನ್ನು ಕಣಕ್ಕಿಳಿಸಿದರೆ, ಅಧಿಕ ಮತಗಳನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.
ಮತ್ತೊಬ್ಬರ ಸೋಲು ನಮ್ಮ ಉದ್ದೇಶ ಅಲ್ಲ, ನಾನು ಗೆಲ್ಲುವುದಷ್ಟೇ ನನ್ನ ಗುರಿ ಎಂದು ಹೊರಟಿರುವ ಮಂತರ್ ಗೌಡರು, ಮಡಿಕೇರಿ ಕ್ಷೇತ್ರದ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ನನ್ನನ್ನು ಹೊರಗಿನ ಅಭ್ಯರ್ಥಿ ಎಂದು ಟೀಕಿಸುವವರು ಟೀಕಿಸಲಿ. ಆದರೆ, ನಮ್ಮ ಪೂರ್ವಿಕರು ಐದು ಶತಮಾನದಿಂದ ಕೊಡಗು ಜಿಲ್ಲೆಯಲ್ಲೇ ವಾಸವಿದ್ದಾರೆ. ನಾವು ಇಲ್ಲಿ ೯೦ ವರ್ಷ ಹಳೆಯದಾದ ಮನೆಯಲ್ಲೇ ವಾಸವಿದ್ದೇವೆ. ನನ್ನ ಪತ್ನಿ ದಿವ್ಯ ಸಹ ಮಡಿಕೇರಿಯವರೇ. ಸಮಾಜಮುಖಿ ಕೆಲಸಗಳು ಮತ್ತು ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಹೇಳಿ ಮತ ಯಾಚಿಸುತ್ತಿದ್ದೇನೆ. ಖಂಡಿತವಾಗಿಯೂ ಕ್ಷೇತ್ರದ ಜನ ನನ್ನೊಂದಿಗೆ ಇದ್ದಾರೆ. ನನ್ನನ್ನು ಬಹುಮತದಿಂದ ಆಶೀರ್ವದಿಸಿ, ಅವರ ಸೇವೆಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಮಂತರ್ ಗೌಡ ಅವರದ್ದಾಗಿದೆ.
ಒಟ್ಟಿನಲ್ಲಿ, ರೋಗಿಗಳ ಸಮಸ್ಯೆಗಳನ್ನು ನಿವಾರಿಸುವ ಡಾ.ಮಂತರ್ ಗೌಡರಿಗೆ, ಮಡಿಕೇರಿ ಕ್ಷೇತ್ರದ ಸಮಸ್ಯೆಗಳನ್ನೂ ನಿವಾರಿಸುವ, ಜನಸೇವೆ ಮಾಡುವ ಅವಕಾಶ ಸಿಗುತ್ತಾ ಕಾದು ನೋಡಬೇಕು.