ರೋಗಿಗಳ ಮೇಲೆ ತೀವ್ರ ನಿಗಾವಹಿಸಿ

ಜನತೆಯ ಅರಿವಿಗಾಗಿ ‘ಕೊರೊನಾ ಸುಪ್ರಭಾತ’
ಪುತ್ತೂರು, ಮೇ ೨- ಮಿತಿಮೀರಿ ಹರಡುತ್ತಿರುವ ಕೊರೊನಾ ಎರಡನೇ ಅಲೆಯ ನಿಯಂತ್ರಣದ ಹಿನ್ನಲೆಯಲ್ಲಿ ಬೇರೆ ಜಿಲ್ಲೆ-ಊರುಗಳಿಂದ ಬಂದವರು, ಹೋಮ್ ಕ್ವಾರಂಟೈನ್ ಹಾಗೂ ಐಶೋಲೇಶನ್‌ನಲ್ಲಿರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಬೇಕು. ನಗರಸಭಾ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿ ಮುಂಜಾನೆ ವಾಹನ ಧ್ವನಿವರ್ಧಕದಲ್ಲಿ ಕೊರೊನಾ ಸುಪ್ರಭಾತದ ಮೂಲಕ ಅರಿವು ನೀಡುವ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಆರೋಗ್ಯ ಇಲಾಖೆ ಹಾಗೂ ನಗರ ಸಭಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲ ಮಂದಿಗೆ ಕೊರೋನಾ ಬಂದಿದ್ದರೂ ಗಮನಕ್ಕೆ ಬಂದಿಲ್ಲ. ಕ್ವಾರಂಟೈನ್, ಐಸೋಲೇಶನ್‌ಗಳಲ್ಲಿ ಇರಬೇಕಾದವರು ತಿರುಗಾಡುತ್ತಿದ್ದಾರೆ. ಅವರಿಗೆ ಎಚ್ಚರಿಕೆ ಕೊಡುವವರು ಯಾರೂ ಇಲ್ಲ. ಈ ಬಗ್ಗೆ ಸ್ಥಳಿಯರಲ್ಲಿ ಅರಿವು ಮೂಡಿಸಿ ಮಾಹಿತಿ ಪಡೆದುಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಅಧ್ಯಾಪಕರು ಎಲ್ಲಾ ಮನೆಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳಬೇಕು. ಅಧ್ಯಾಪಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.
ರ‍್ಯಾಂಡಮ್ ಟೆಸ್ಟ್ ಇಲ್ಲ:
ಈ ಹಿಂದೆ ಕೊರೊನಾ ರೋಗಗಳಿಗೆ ಸಂಬಂಧಿಸಿ ರ‍್ಯಾಂಡಮ್ ಆಗಿ ಪರೀಕ್ಷೆ ಮಾಡಲಾಗುತಿತ್ತು. ಈಗ ಐಎಲ್‌ಐ ಪ್ರತ್ಯೇಕ ಪರೀಕ್ಷೆ ಮಾಡಲಾಗುತ್ತಿದೆ. ಕೊರೊನಾ ಲಕ್ಷಣ ಇರುವವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಇರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ಡಾ.ಅಶೋಕ್ ಕುಮಾರ್ ರೈ ತಿಳಿಸಿದರು.
ವಿಳಾಸ ತಪ್ಪು
ಕೊರೊನಾ ರೋಗಿಗಳು ವಿಳಾಸ ಹಾಗೂ ದೂರವಾಣಿ ನಂಬರ್‌ಗಳನ್ನು ತಪ್ಪಾಗಿ ನೀಡುತ್ತಿದ್ದಾರೆ. ನಮಗೆ ರೋಗಿಗಳ ವಿಳಾಸ ಹಾಗೂ ದೂರವಾಣಿ ನಂಬರನ್ನು ಸಂಪರ್ಕಿಸಿದಾಗ ಅವರು ಹೊರ ತಾಲೂಕು, ಜಿಲ್ಲೆಗಳಲ್ಲಿ ಇರುವ ಕುರಿತು ಮಾಹಿತಿ ನೀಡುತ್ತಿದ್ದಾರೆ. ಆದರೆ ದಾಖಲೆಯಲ್ಲಿ ಪುತ್ತೂರಿನಲ್ಲಿರವುದಾಗಿ ದಾಖಲಾಗಿರುತ್ತದೆ ಎಂದು ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್ ಹಾಗೂ ರಾಮಚಂದ್ರ ಅವರು ಶಾಸಕರ ಗಮನಕ್ಕೆ ತಂದರು.
ಶೇ.೬೦.೮೭ ಲಸಿಕೆ ವಿತರಣೆ:
ತಾಲೂಕಿನಲ್ಲಿ ೫೬,೮೬೪ ಮಂದಿ ೪೫ ರಿಂದ ೫೯ ವರ್ಷ ಮೇಲ್ಪಟ್ಟಿದ್ದವರಿದ್ದು ಈ ಪೈಕಿ ೧೫,೦೧೦ ಮಂದಿಗೆ ಲಸಿಕೆ ವಿತರಣೆಯಾಗಿದೆ. ೬೦ ವರ್ಷ ಮೇಲ್ಪಟ್ಟರುವ ೨೭,೪೬೭ ಮಂದಿಯಿದ್ದು ೧೪,೭೧೯ ಮಂದಿಗೆ ಲಸಿಕೆ ವಿತರಿಸಲಾಗಿದೆ. ತಾಲೂಕಿನಲ್ಲಿ ಶೇ,೬೦.೮೭ ಲಸಿಕೆ ವಿತರಣೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು ೬೦೦೦ ಮಂದಿಗೆ ಲಸಿಕೆ ವಿತರಣೆಯಾಗಿದೆ. ಮೇ ನಂತರ ವಿತರಣೆಗೆ ಲಸಿಕೆ ಸಂಗರಹ ಇಲ್ಲ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ತಿಳಿಸಿದರು.
ಪುತ್ತೂರಿನಲ್ಲಿ ಅನಗತ್ಯವಾಗಿ ಅಂಗಡಿಗಳನ್ನು ತೆರೆಯಲಾಗುತ್ತಿದೆ. ದಂಡ ಹಾಕಿದರೂ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದ ಪೌರಾಯುಕ್ತರಿಗೆ ಅಂತಹ ಅಂಗಡಿಗಳ ವಿರುದ್ಧ ಪೊಲೀಸ್ ಸಹಕಾರದೊಂದಿಗೆ ವ್ಯವಹರಿಸಿ ಎಂದು ಶಾಸಕರು ತಿಳಿಸಿದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಹಾಗೂ ತಹಶೀಲ್ದಾರ್ ರಮೇಶ್‌ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ ಹಾಗೂ ಆರೋಗ್ಯ ಇಲಾಖೆ ಸಿಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಸ್ವಾಗತಿಸಿದರು. ಕೊರೊನಾ ಕ್ವಾರಂಟೈನ್ ನೋಡೆಲ್ ಅಧಿಕಾರಿ ಡಾ.ಜಯದೀಪ್ ವಂದಿಸಿದರು.
ಆಸ್ಪತ್ರೆಯಲ್ಲಿ ೧೫ ರೋಗಿಗಳು
ಬಲ್ನಾಡಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ತೆರೆಯಲಾದ ಕೊರೊನಾ ಕೇಂದ್ರದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬಂದಿಗಳ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ೧೫ ಪುರುಷರು, ೬ ಮಹಿಳೆಯಿರಿಗೆ, ೪ ವೆಂಟಿಲೇಟರ್ ೨ ಐಶೋಲೇಶನ್ ಬೆಡ್‌ಗಳನ್ನು ಮೀಸಲಿಡಲಾಗಿದೆ. ಇಲ್ಲಿ ಒಟ್ಟು ೧೫ ಕೊರೊನಾ ರೋಗಿಗಳಿದ್ದು ೧೩ ಪಾಸಿಟಿವ್, ೨ ಶಂಕಿತ ಹಾಗೂ ಒರ್ವ ಆಕ್ಸಿಜನ್‌ನಲ್ಲಿದ್ದಾರೆ ಎಂದು ಡಾ. ಆಶಾ ಪುತ್ತೂರಾಯ ತಿಳಿಸಿದರು.