ಬೀದರ:ಜೂ.22:ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಔರಾದ(ಬಿ) ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಕ್ರ್ಯಾಳ ಗ್ರಾಮದವರನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ ಅವರು ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಳಿಗೆ ಹೋಗಿ ಆರೋಗ್ಯ ಹೇಗಿದೆ ?, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರಾ? ಎಂದು ಪ್ರಶ್ನಿಸುವ ಮೂಲಕ ಚಿಕಿತ್ಸೆಯ ಕುರಿತು ಖುದ್ದಾಗಿ ವಿವರಣೆ ಪಡೆದರು. ಸರಿಯಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ. ಶೀಘ್ರ ಗುಣಮುಖರಾಗುತ್ತೀರಿ ಯಾವುದೇ ಕಾರಣಕ್ಕೂ ಹೆದರದಿರಿ ಎಂದು ಧೈರ್ಯ ತುಂಬಿದರು.
ಎಲ್ಲ ರೋಗಿಗಳಿಗೂ ಉತ್ತಮ ಔಷಧೋಪಚಾರ ಮಾಡುವ ಮೂಲಕ ಶೀಘ್ರ ಗುಣಮುಖರಾಗುವಂತೆ ವೈದ್ಯರು ಕಾಳಜಿ ವಹಿಸಬೇಕು. ಔಷಧಕ್ಕೆ ಕೊರತೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂತಹ ತುರ್ತು ಸಂದರ್ಭದಲ್ಲಿ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಲಭ್ಯವಿದ್ದು ರೋಗಿಗಳ ಆರೋಗ್ಯ ಗಮನಿಸಬೇಕು. ಯಾರೊಬ್ಬರೂ ರಜೆ ಪಡೆಯದೇ ಕೆಲಸ ಮಾಡಬೇಕು. ಈ ದಿಶೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಮುಖಂಡರಾದ ಕೇರಬಾ ಪವಾರ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಬನ್ಸಿ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.